Koppal

ಕಲ್ಯಾಣ ಕರ್ನಾಟಕ ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ-ಹನುಮಂತಪ್ಪ ಅಂಡಗಿ


ಕೊಪ್ಪಳ : ಕಲ್ಯಾಣ ಕರ್ನಾಟಕ ಸಾಹಿತ್ಯಿಕವಾಗಿ ಶ್ರೀಮಂತವಾಗಿದೆ. ಶರಣರು, ಸಂತರು, ದಾಸರ ಸಾಹಿತಿಗಳ ನೆಲೆಬೀಡಾದ ಕಲ್ಯಾಣ ಕರ್ನಾಟಕದ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದರೆ ಈ ಭಾಗದಲ್ಲಿ ಪ್ರಕಾಶಕರ ಕೊರತೆ ಇದೆ. ಈ ಭಾಗದ ಬಹುತೇಕ ಸಾಹಿತಿಗಳ ಗ್ರಂಥಗಳನ್ನು ಬೇರೆ ಭಾಗದ ಪ್ರಕಾಶಕರು ಮುದ್ರಿಸಿ, ಲೇಖಕರಿಗೆ ಬೆರಳೆಣಿಕೆಯಷ್ಟು ಪ್ರತಿಗಳನ್ನು ನೀಡಿ ಉಳಿದ ಪ್ರತಿಗಳನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಲೇಖಕ ಬಡವನಾಗಿ, ಪ್ರಕಾಶಕ ಶ್ರೀಮಂತರಾದ ಸಾಕಷ್ಟು ಉದಾಹರಣೆಗಳಿವೆ. ಲೇಖಕರೇ ಪ್ರಕಾಶಕರಾಗಬೇಕು. ಅಂದಾಗ ಮಾತ್ರ ಅವರು ತಾವು ಹಾಕಿದ ಬಂಡವಾಳವನ್ನು ಮರಳಿ ಪಡೆದು, ಮತ್ತೊಂದು ಗ್ರಂಥವನ್ನು ಹೊರತರಲು ಸಾಧ್ಯವಾಗುತ್ತದೆ. ಪ್ರಕಾಶಕರ ಕೊರತೆಯನ್ನು ಮನಗಂಡು ಆ ಕೊರತೆಯನ್ನು ನೀಗಿಸಲು ಸಾಹಸಿ ಸಂಘಟಕ, ಪ್ರತಿಭಾ ಪೋಷಕರಾದ ಮಹೇಶಬಾಬು ಸುರ್ವೆ ಅವರ ಸಂಚಾಲಕತ್ವದಲ್ಲಿ ‘ಹೈದರಾಬಾದ ಕರ್ನಾಟಕ ಪುಸ್ತಕ ಪ್ರಕಾಶಕರ, ಮಾರಾಟಗಾರರ, ಮುದ್ರಕ ಸಂಘವನ್ನು ಆರಂಭಿಸಿರುವುದು ಸಂತಸದ ಸಂಗತಿ. ಈ ಭಾಗದಲ್ಲಿಯೇ ಜನ್ಮತಾಳಿದ ಈ ಸಂಘವು ಪ್ರಪ್ರಥಮ ಬಾರಿಗೆ ಪ್ರಕಾಶಕರ ಸಮ್ಮೇಳನವನ್ನು ಕೊಪ್ಪಳದಲ್ಲಿ ಅಕ್ಟೋಬರ್ 24 ರಂದು ಹಮ್ಮಿಕೊಂಡಿದೆ. ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಲೇಖಕ, ಪ್ರಕಾಶಕ, ಸಂಪಾದಕ ಜಿ.ಎಸ್.ಗೋನಾಳ ಅವರನ್ನು ಆಯ್ಕೆ ಮಾಡಿರುವುದು ಸೂಕ್ತವಾಗಿದೆ. ಜಿ.ಎಸ್.ಗೋನಾಳರು ತಮ್ಮ ವಿಶಾಲ ಪ್ರಕಾಶನದ ಮೂಲಕ ಹಲವಾರು ಯುವ ಪ್ರತಿಭೆಗಳ ಗ್ರಂಥಗಳನ್ನು ಹೊರತರುವ ಕೆಲಸ ಮಾಡಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಹೇಳಿದರು.
ಅವರು ಬುಧವಾರ ಕೊಪ್ಪಳದ ಪದಕಿ ಲೇಔಟ್‍ನಲ್ಲಿರುವ ಬಸವ ಸದನ ನಿವಾಸದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಹೈದರಾಬಾದ ಕರ್ನಾಟಕ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷರಾಗಿರುವ ಜಿ.ಎಸ್.ಗೋನಾಳವರನ್ನು ಸನ್ಮಾನಿಸಿ ಮಾತನಾಡಿದರು.
ಸಮ್ಮೇಳನಾಧ್ಯಕ್ಷರಾದ ಜಿ.ಎಸ್.ಗೋನಾಳ, ಕೊಪ್ಪಳ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಕಂಬಳಿ, ಉಪನ್ಯಾಸಕರಾದ ಆರ್.ರೇಣುಕರಾಜ, ಪತ್ರಕರ್ತರಾದ ಉಮೇಶ ಪೂಜಾರ, ಸಿದ್ಧಲಿಂಗಯ್ಯ ಹಿರೇಮಠ, ಹಿರಿಯರಾದ ರತ್ನಮ್ಮ ಗೋನಾಳ, ಕಾಳಪ್ಪ ಬಡಿಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಮೇಘರಾಜರೆಡ್ಡಿ ಗೋನಾಳ ನಿರೂಪಿಸಿದರು. ಬಸವರಾಜರೆಡ್ಡಿ ಗೋನಾಳ ಸ್ವಾಗತಿಸಿ ವಂದಿಸಿದರು. ಕೊಪ್ಪಳದ ಪದಕಿ ಲೇಔಟ್‍ನಲ್ಲಿರುವ ಬಸವ ಸದನ ನಿವಾಸದಲ್ಲಿ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಹೈದರಾಬಾದ ಕರ್ನಾಟಕ ಪ್ರಕಾಶಕರ ಸಮ್ಮೇಳನದ ಅಧ್ಯಕ್ಷರಾಗಿರುವ ಜಿ.ಎಸ್.ಗೋನಾಳವರನ್ನು ಮತ್ತು ಅವರ ಧರ್ಮಪತ್ನಿ ರತ್ಮಮ್ಮ ಗೋನಾಳರವರವನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ಸನ್ಮಾನಿಸಿದರು.


Leave a Reply