Belagavi

ವಾಲ್ಮೀಕಿಯವರು ಅನೇಕ ಜ್ಞಾನಶಿಸ್ತುಗಳನ್ನು ಬಲ್ಲವರಾಗಿದ್ದರೆ: ಡಾ.ಎಂ.ಜಯಪ್ಪ


ಬೆಳಗಾವಿ: ಮಹರ್ಷಿ ವಾಲ್ಮೀಕಿಯವರು ರಾಮಾಯಣ ಎಂಬ ಮಹಾ ಕಾವ್ಯ ಜಗತ್ತಿಗೆ ನೀಡುವುದರ ಮೂಲಕ ಜಗತ್ತಿನ ಕಾವ್ಯಪರಂಪರೆಗೆ ಮಹಾಮಾರ್ಗವನ್ನು ತೆರೆದರು. ವಾಲ್ಮೀಕಿಯವರು ಅನೇಕ ಜ್ಞಾನಶಿಸ್ತುಗಳನ್ನು ಬಲ್ಲವರಾಗಿದ್ದರೆಂಬುದು ರಾಮಾಯಣ ಕಾವ್ಯದಿಂದ ತಿಳಿದುಬರುತ್ತದೆ ಎಂದು ಪ್ರಾಚಾರ್ಯ ಡಾ.ಎಂ.ಜಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಇಂದು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮಹಾವಿದ್ಯಾಲಯದ ಪ್ರಾಚಾರ್ಯರು ವಾಲ್ಮೀಕಿಯ ನಂತರ ಬಂದ ಮಹಾಕವಿಗಳಾದಿಯಾಗಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ವಾಲ್ಮೀಕಿಯನ್ನು ಅನುಸರಿಸಿದ್ದಾರೆ ಮತ್ತು ಋಣಿಯಾಗಿದ್ದಾರೆ. ವಾಲ್ಮೀಕಿಯ ರಾಮಾಯಣವು ಮಾನವೀಯ ಮೌಲ್ಯಗಳ ಆಗರವಾಗಿದೆ. ಅದರಲ್ಲಿರುವ ಮೌಲ್ಯಗಳನ್ನು ಸಮಕಾಲೀನ ಸಮಾಜ ಅಳವಡಿಸಿಕೊಂಡಲ್ಲಿ ಸಮಾಜ ಇನ್ನಷ್ಟು ಸ್ವಾಸ್ಥ್ಯದಿಂದ ಕೂಡಿರುತ್ತದೆ ಎಂದರು.

ಸಾಹಿತಿ ಶಿ. ಗು. ಕುಸುಗಲ್ಲ ಸಂವೇದನಾಶೀಲತೆ ವ್ಯಕ್ತಿಯನ್ನು ಮಾನವನನ್ನಾಗಿ ರೂಪಿಸುತ್ತದೆ ಎಂಬುದಕ್ಕೆ ಮಹರ್ಷಿ ವಾಲ್ಮೀಕಿಯು ಉದಾಹರಣೆಯಾಗಿದ್ದಾರೆ ಎಂದರು.

ಡಾ. ಕವಿತಾ ಕುಸುಗಲ್ಲ ವಾಲ್ಮೀಕಿಯ ಕುರಿತಾದ ಅನೇಕ ಸಂಗತಿಗಳಿಗೆ ಉತ್ತರವಿಲ್ಲ. ಅವುಗಳ ಕುರಿತು ಸಂಶೋಧನೆ ಮತ್ತು ವಿದ್ವತ್ವಲಯದಲ್ಲಿ ಗಂಭೀರ ಚರ್ಚೆ ಆಗಬೇಕಿದೆ ಎಂದರು.

ದೇಶದ ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ವಾಲ್ಮೀಕಿಗೆ ದರೋಡೆಕೋರ ಎಂಬ ಪದವನ್ನು ಬಳಸಬಾರದೆಂದು ಆದೇಶ ಹೊರಡಿಸಿರುವುದನ್ನು ನೆನಪಿಸಿಕೊಂಡರು.

ನಿವೃತ್ತ ಪ್ರಾಚಾರ್ಯರಾದ ಡಾ. ಎಂ. ಕೆ. ನಾಯ್ಕ ವಾಲ್ಮೀಕಿಯ ಬದುಕಿನ ಕುರಿತು ಮಾತಾಡಿದರು.‌ ಪ್ರಾಧ್ಯಾಪಕರಾದ ಆಧಿನಾಥ ಉಪಾಧ್ಯಾಯ ವಂದಿಸಿದರು. ಡಾ. ಅರ್ಜುನ ಜಂಬಗಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪ್ರಾಚಾರ್ಯರು


Leave a Reply