Belagavi

ಸೌಹಾರ್ದ ಸಹಕಾರಿಯ ವಿವಿಧ ವಿಷಯಗಳ ಬಗ್ಗೆ ತಿಳಿಸಿದ ಅಧ್ಯಕ್ಷ ಕೃಷ್ಣಾರೆಡ್ಡಿ


ಬೆಳಗಾವಿ: ಸೌಹಾರ್ದ ಸಂಯುಕ್ತ ಸಹಕಾರಿ ಕಾಯ್ದೆ ತಿದ್ದುಪಡಿ, ಆಶಾದಾಯಕ ಬೆಳೆವಣಿಗೆ, ಆದಾಯ ತೆರಿಗೆ ಸಮಸ್ಯೆಗಳ‌ ನಿವಾರಣೆಗೆ ಪ್ರಯತ್ನ ಕುರಿತು, ಠೇವಣಿದಾರರ ಹಿತರಕ್ಷಣೆಗಾಗಿ ಟಾಸ್ಕ್ ಫೋರ್ಸ್ ರಚನೆ, ಸಹಕಾರಿಗಳ ಜವಾಬ್ದಾರಿ, ಸಹಕಾರಿಗಳಿಂದ ಸಾಮಾಜಿಕ ಕಾರ್ಯ ಸೇರಿದಂತೆ ಹಲವು ವಿಷಯಗಳ ಕುರಿತು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್.ಕೃಷ್ಣಾರೆಡ್ಡಿ ಅವರು ತಿಳಿಸಿದರು.

ಶನಿವಾರ ಬೆಳಗಾವಿಯಲ್ಲಿ ಖಾಸಗಿ ಹೊಟೆಲ್ ನಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಸೌಹಾರ್ದ ಸಹಕಾರಿ ಕಾಯ್ದೆಯಲ್ಲಿ ಅಗತ್ಯ ತಿದ್ದುಪಡಿ ತರಲು ನಿರಂತರವಾಗಿ ಪ್ರಯತ್ನಿಸಲಾಗಿದೆ. ತಿದ್ದುಪಡಿಗಳು ವಿಧಾನ ಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗಿ ಅಂಗೀಕಾರಗೊಂಡಿವೆ. ಇದಕ್ಕೆ ಕಾರಣರಾದ ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಹಕಾರ ಸಚಿವ ಎಸ್ ಟಿ
ಸೋಮಶೇಕರರವರನ್ನು ಅಭಿನಂದಿಸುತ್ತೇನೆ. ರಾಜ್ಯದಲ್ಲಿ ಸೌಹಾರ್ದ ಸಹಕಾರಿ ಕಾಯ್ದೆ ಜಾರಿಗೆ ಬಂದಾಗಿನಿಂದಲೂ ಇದುವರೆಗೆ ಹಲವು ಬಾರಿ ಕಾಯ್ದೆಗೆ ತಿದ್ದುಪಡಿಗಳು ಆಗಿವೆ ಎಂದುರು.

ಇನ್ನು ದೇಶದಲ್ಲಿ 1.5 ಲಕ್ಷ ವಿವಿಧ ರೀತಿಯ ಸಹಕಾರ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ದೇಶದ 6.30 ಲಕ್ಷ ಗ್ರಾಮಗಳಲ್ಲಿ ಸಹಕಾರ ಕ್ಷೇತ್ರ ವ್ಯಾಪಿಸಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ಸಹಕಾರ ಕ್ಷೇತ್ರಕ್ಕೆ ಪ್ರತ್ಯೇಕ ಸಚಿವಾಲಯ ರಚಿಸಿರುವುದಲ್ಲದೆ, ಪ್ರಭಾವಿ ಸಹಕಾರ ಸಚಿವರನ್ನು ನೇಮಕ ಮಾಡಿರುವುದು ಸಹಕಾರ ಕ್ಷೇತ್ರದ ಅಭಿವೃದ್ಧಿಯ ದೃಷ್ಟಿಯಿಂದ ಆಶಾದಾಯಕ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ಕಾಯ್ದೆಯನ್ವಯ ತೆರಿಗೆ ವಿನಾಯಿತಿ ಇದ್ದಾಗ್ಯೂ ಬೇರೆ ಬೇರೆ ಕಾರಣಗಳನ್ನು ಉಲ್ಲೇಖಿಸಿ ಸಹಕಾರ ಸಂಸ್ಥೆಗಳಿಗೆ ತೆರಿಗೆ ನೋಟೀಸ್ ಗಳು ಜಾರಿಯಾಗುತ್ತಿರುವುದನ್ನು ಗಮನಿಸಿ, ಸಹಕಾರ ಸಂಸ್ಥೆಗಳ ಆದಾಯ ತೆರಿಗೆ ತೊಂದರೆಗಳ ನಿವಾರಣೆಯ ಬಗ್ಗೆ ಕೇಂದ್ರ ಸಹಕಾರ ಸಚಿವರನ್ನು, ಕೇಂದ್ರ ಹಣಕಾಸು ಸಚಿವರನ್ನು, ಸಿಬಿಡಿಟಿ ಅಧ್ಯಕ್ಷರನ್ನು ಭೇಟಿ
ಮಾಡಿ ಸೂಕ್ತ ಪರಿಹಾರಕ್ಕೆ ಪ್ರಯತ್ನ ನಡೆಸಲಾಗಿದೆ ಎಂದು ತಿಳಿಸಿದರು.

ಯಾವುದೇ ಸೌಹಾರ್ದ ಸಹಕಾರ ಸಂಸ್ಥೆಗಳ ಬಗ್ಗೆ ಈವಣಿದಾರರಿಂದ ದೂರು ಸ್ವೀಕೃತವಾದಲ್ಲಿ, ಠೇವಣಿದಾರರಿಗೆ ಹಣ
ವಂಚನೆ. ಹಣಕಾಸು ಅವ್ಯವಹಾರದಲ್ಲಿ
ತೊಡಗಿರುವ ಸಂಸ್ಥೆಗಳ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಲು
ಉನ್ನತ ಅಧಿಕಾರಿಗಳನ್ನೊಳಗೊಂಡ ವಿಶೇಷ ಟಾಸ್ಕ್ ಫೋರ್ಸ್ ರಚನೆ ಮಾಡಿ ಜಾರಿಗೆ ತರಲಾಗಿದೆ ಎಂದು ತಿಳಿಸಿದರು.

ಸಹಕಾರ ಸಂಸ್ಥೆಗಳು ತಾವು ಹಣ ಕಳೆದುಕೊಂಡು ಠೇವಣಿದಾರರಿಗೆ ಹಣ ಹಿಂತಿರುಗಿಸಲಾಗದ ಕೆಲವು ಸಂಸ್ಥೆಗಳಿಂದ ಪೂರ್ಣ ಸಹಕಾರ ಕ್ಷೇತ್ರದ ಮೇಲಿನ ಜನರ ವಿಶ್ವಾಸ ಕಡಿಮೆಯಾಗುತ್ತದೆ. ಇನ್ನು ಕೆಲವು ಸಂಸ್ಥೆಗಳು ಕಾನೂನನ್ನು ಉಲ್ಲಂಘಿಸಿ ಅನಗತ್ಯವಾಗಿ ಶಾಖೆಗಳನ್ನು ತೆರೆಯುತ್ತಿರುವುದು, ಅತಿ ಹೆಚ್ಚಿನ
ಬಡ್ಡಿ ಆಮಿಷ ಒಡ್ಡುತ್ತಿರುವುದು ಕೂಡ ಕಂಡುಬಂದಿದೆ. ಇಂತಹ ಸಂಸ್ಥೆಗಳ ಬಗ್ಗೆ ಸ್ಥಳೀಯ ಜಿಲ್ಲಾ ಒಕ್ಕೂಟಗಳು, ಸಹಕಾರ ಸಂಸ್ಥೆಗಳು ಗಮನಹರಿಸಿ ಅಗತ್ಯ ಕಾನೂನು ಪ್ರಾಧಿಕಾರಗಳ ಗಮನಕ್ಕೆ ತರುವ ಕೆಲಸ ಮಾಡಬೇಕಿದೆ. ಹೆಚ್ಚಿನ ಬಡ್ಡಿ ಆಮೀಷಗಳಿಗೆ ಬಲಿಯಾಗದೆ, ಹಣ ತೊಡಗಿಸುವ ಮುನ್ನ ಠೇವಣಿದಾರರು
ಮುಂಜಾಗೃತೆ ವಹಿಸುವುದು ಕೂಡ ಅಗತ್ಯವಾಗಿದೆ ಎಂದು ಹೇಳಿದರು.

ವೇಗವಾಗಿ ಬೆಳೆಯುತ್ತಿರುವ ಸೌಹಾರ್ದ ಸಹಕಾರ ಕ್ಷೇತ್ರದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ 28 ಜಿಲ್ಲೆಯಲ್ಲಿ ಜಿಲ್ಲಾ ಸಂಪರ್ಕ ಕಛೇರಿಯನ್ನು ಹೊಂದಲಾಗಿದೆ. ಇದಲ್ಲದೆ ಸೌಹಾರ್ದ ಸಹಕಾರ ಕ್ಷೇತ್ರದ ಮಾತೃ
ಸಂಸ್ಥೆಯಾದ ಸಂಯುಕ್ತ ಸಹಕಾರಿಯ ಕೇಂದ್ರ ಕಛೇರಿ ಬೆಂಗಳೂರಿನಲ್ಲಿ ಸ್ವಂತ ಕಟ್ಟಡ ನಿಮಾರ್ಣ ಪೂರ್ಣಗೊಂಡಿದೆ. ಬೆಳಗಾವಿ ಹಾಗೂ ಕಲಬುರಗಿ ಪ್ರಾಂತೀಯ ಕಛೇರಿಯ ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಜಗದೀಶ್ ಕವಟಗಿಮಠ, ಸಹಕಾರಿ ಭಾರತಿ ರಾಷ್ಟ್ರೀಯ ಅಧ್ಯಕ್ಷ ರಮೇಶ ವೈದ್ಯ, ಸಂಯುಕ್ತ ಸಹಕಾರಿ ವೃತ್ತಿಪರ ನಿರ್ದೇಶಕ ಲಕ್ಷ್ಮಣ ಮಾರುತಿ ಪವಾರ, ಅಧ್ಯಕ್ಷ ಐ.ಬಿ.ಕೊಪ್ಪದ, ಏಕಲಕ್ಷ ಸೌಹಾರ್ದ ಸಹಕಾರಿ ಅಧ್ಯಕ್ಷ ಪ್ರಶಾಂತ ಬಡವನಾಚೆ ಉಪಸ್ಥಿತರಿದ್ದರು.


Leave a Reply