Belagavi

ಸಹಕಾರ ಕ್ಷೇತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈ ಚಾಚಿ ಸಹಾಯ ನೀಡುತ್ತಿರುವುದು ನಮ್ಮೆಲ್ಲರ ಹೆಮ್ಮೆ : ಮಹಾಂತೇಶ ಕವಟಗಿಮಠ


ಬೆಳಗಾವಿ: ೨೧ ನೇ ಶತಮಾನದಲ್ಲಿ ಎದುರಾಗುತ್ತಿರುವ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ನಿಲ್ಲುವ ಸಾಮರ್ಥ್ಯ ಸಹಕಾರ ಕ್ಷೇತ್ರದಲ್ಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೈ ಚಾಚಿ ಸಹಾಯ ನೀಡುತ್ತಿರುವುದು ನಮ್ಮೆಲ್ಲರ ಹೆಮ್ಮೆ ಎಂದು ವಿಧಾನಪರಿಷತ್ತ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಅಭಿಪ್ರಾಯಪಟ್ಟರು.

ಬೆಳಗಾವಿ ನೆಹರು ನಗರದ ಕೆಪಿಟಿಸಿಎಲ್ ಸಭಾಂಗಣದಲ್ಲಿ ಶನಿವಾರ (ಅ.23) ರಂದು ರಾಜ್ಯ ಸೌಹಾರ್ದ ಸಹಕಾರಿ ಬೆಳಗಾವಿ ಪ್ರಾಂತ ಆಯೋಜಿಸಿದ್ದ ಬೆಳಗಾವಿ, ಬೈಲಹೊಂಗಲ, ಖಾನಾಪೂರ, ರಾಮದುರ್ಗ, ಸವದತ್ತಿ , ಗೋಕಾಕ, ಮೂಡಲಗಿ , ಚನ್ನಮ್ಮ ಕಿತ್ತೂರು ಮತ್ತು ಯರಗಟ್ಟಿ ತಾಲ್ಲೂಕಗಳ ಸೌಹಾರ್ದ ಸಹಕಾರಿಗಳು ಸಂಪರ್ಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ರಾಷ್ಟ್ರೀಯ ಬ್ಯಾಂಕ್ ಗಳ ಜೊತೆಗೆ ಸ್ಪರ್ಧೆ ಮಾಡಬೇಕಿದ್ದರೆ ಸಹಕಾರ ಸಂಸ್ಥೆಗಳ ಖರ್ಚು-ವೆಚ್ಚಗಳಿಗೆ ಕಡಿವಾಣ ಹಾಕಬೇಕು. ದಲ್ಲಾಳಿಗಳ ಹಸ್ತಕ್ಷೇಪ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ಜನಧನ ಯೋಜನೆ ಮಾದರಿಯಲ್ಲಿ ಸಹಕಾರ ಕ್ಷೇತ್ರವನ್ನು ಇನ್ನಷ್ಟು ಮೇಲೆತ್ತಬೇಕಿದೆ. ನಾವು ಜನಪರ ಕೆಲಸ, ಸೇವೆ ನೀಡುವ ಉದ್ದೇಶ ಹೊಂದಿದ್ದರೆ ಮಾತ್ರ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುನ್ನಡೆಯಲು ಸಾಧ್ಯವಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಜನಸಾಮಾನ್ಯರಿಗೆ ಆಗುತ್ತಿರುವ ಸಮಸ್ಯೆಗಳಿಗೆ ಸಹಕಾರ ಕ್ಷೇತ್ರ ಪರಿಹಾರವಾಗಬೇಕು. ಮಾರುಕಟ್ಟೆ ಬೆಳವಣಿಗೆಗೆ ತಕ್ಕಂತೆ ಆದಷ್ಟು ಬೇಗ ಹೊಂದಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಬರುವ ವರ್ಷಗಳಲ್ಲಿ ಸಹಕಾರ ಕ್ಷೇತ್ರ ಇನ್ನಷ್ಟು ಬದಲಾವಣೆ ಕಾಣಲಿದ್ದು ಸಹಕಾರ ಕ್ರಾಂತಿಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಪಾರದರ್ಶಕತೆ ಹೆಚ್ಚುವುದರಿಂದ ಪರಿಶ್ರಮಿ ಸಂಸ್ಥೆಗಳಿಗೆ ಅನುಕೂಲವಾಗಲಿದೆ. ಶೋಷಿತ ಸಂಸ್ಥೆಗಳಿಗೆ ಮಾರಕವೂ ಆಗಲಿದೆ. ಹಾಗಾಗಿ ಸಹಕಾರ ಸಂಸ್ಥೆಗಳು ಈಗಿನಿಂದಲೇ ಪಾರದರ್ಶಕ ಮತ್ತು ಪ್ರಾಮಾಣಿಕ ಸೇವೆ ಮೂಲಕ ರೈತರು, ಬಡಜನರ ಏಳಿಗೆ ಆದ್ಯತೆ ನೀಡಬೇಕು. ಸಮಯಪ್ರಜ್ಞೆ, ಧನಾತ್ಮಕ ಚಿಂತನೆ ಮತ್ತು ಪ್ರಾಧಾನ್ಯತೆಗಳಿಗೆ ಮಹತ್ವ ನೀಡಿದರೆ ಸಹಕಾರಿಗಳು ಯಶಸ್ವಿಯಾಗುತ್ತವೆ ಎಂದು ಸಲಹೆ ನೀಡಿದರು.

ರಾಷ್ಟ್ರೀಯ ಸಹಕಾರ ಭಾರತಿ ಅಧ್ಯಕ್ಷ ರಮೇಶ್ ವೈದ್ಯ ಮಾತನಾಡಿ, ಈ ಹಿಂದೆ ಸಂಕೇಶ್ವರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಿಗದಿ ಮಾಡುತ್ತಿದ್ದ ಕಬ್ಬಿನ ದರ ಇಡೀ ರಾಜ್ಯಕ್ಕೆ ಮಾದರಿಯಾಗಿರುತ್ತಿತ್ತು. ಅಂತಹ ಪಾರದರ್ಶಕ ಮತ್ತು ಪ್ರಾಮಾಣಿಕ ಆಡಳಿತ ಸಹಕಾರ ಕ್ಷೇತ್ರದಲ್ಲಿರಬೇಕು.

ಕೆಲ ರಾಜಕಾರಣಿಗಳು ರಾಜಕೀಯ ಬೆಳವಣಿಗೆಗಾಗಿ ಸಹಕಾರ ಕ್ಷೇತ್ರವನ್ನು ಕೆಟ್ಟ ಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಹಾಗಾಗಿ ಸಹಕಾರ ಕ್ಷೇತ್ರದಲ್ಲಿರುವವರು ಆತ್ಮಶುದ್ದೀಕರಣ ಬೆಳೆಸಿಕೊಂಡರೆ ಮಾತ್ರ ಸಂಸ್ಥೆ ಉದ್ದಾರ ಆಗಲು ಸಾಧ್ಯ ಎಂದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಎಚ್.ಬಿ.ಕೃಷ್ಣಾರೆಡ್ಡಿ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಉಪಾಧ್ಯಕ್ಷ ಜಗದೀಶ್ ಕವಟಗಿಮಠ, ನಿರ್ದೇಶಕ ಲಕ್ಷ್ಮಣ ಪವಾರ, ಪ್ರದಾನ ವ್ಯವಸ್ಥಾಪಕ ಬಸವರಾಜ ಹೊಂಗಲ, ಸ್ವಾಗತಿಸಿದರು ಅಶ್ವಿನಿ ಕಮ್ಮಾರ ನಿರೂಪಿಸಿದರು ಪ್ರತಿಭಾ ಮಠ ವಂದಿಸಿದರು ಸಹಕಾರಿಯ ನಿರ್ದೇಶಕರುಗಳು,ಸಿಬ್ಬಂದಿಗಳು ಉಪಸ್ಥಿತರಿದ್ದರು


Leave a Reply