Belagavi

ಅಪ್ಪುಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಸರಳ ಕನ್ನಡ ರಾಜ್ಯೋತ್ಸವ ಆಚರಣೆ


ಬೆಳಗಾವಿ: ಕರುನಾಡು ಯುವರತ್ನ, ಸಮಾಜ ಸೇವಕ ಪುನೀತ್ ರಾಜ್‍ಕುಮಾರ್ ಅಕಾಲಿಕ ಅಗಲಿಕೆ ಹಿನ್ನೆಲೆ ಬೆಳಗಾವಿಯಲ್ಲಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ವಿವಿಧ ಕನ್ನಡಪರ ಸಂಘಟನೆಗಳು ಸರಳವಾಗಿ ಈ ಬಾರಿ ಕನ್ನಡ ರಾಜ್ಯೋತ್ಸವ ಆಚರಿಸಿದವು.

ನವೆಂಬರ್ 1 ರಂದು ಸೋಮವಾರ ಬೆಳಗಾವಿಯ ರಾಣಿ ಚನ್ನಮ್ಮ ವೃತ್ತದಲ್ಲಿ ಚನ್ನಮ್ಮಾಜಿ ಪುತ್ಥಳಿಗೆ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ, ಕಾರಂಜಿಮಠದ ಗುರುಶಿದ್ಧ ಸ್ವಾಮೀಜಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಇದೇ ವೇಳೆ ಹಳದಿ, ಕೆಂಪು ಬಣ್ಣದ ಬಲೂನ್‍ಗಳನ್ನು ಹಾರಿಸುವ ಮೂಲಕ ರಾಜ್ಯೋತ್ಸವಕ್ಕೆ ಚಾಲನೆ ನೀಡಲಾಯಿತು.

ಅದೇ ರೀತಿ ನಮ್ಮೆಲ್ಲರನ್ನು ಅಗಲಿದ ಕನ್ನಡದ ಕಣ್ಮನಿ, ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರಿಗೆ ಇದೇ ವೇಳೆ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಪ್ಪು ಭಾವಚಿತ್ರ ಇರುವ ಬ್ಯಾನರ್‍ಗೆ ಪೂಜೆ ಮಾಡಿ, ಗೌರವ ಸಲ್ಲಿಸಿ, ಘೋಷಣೆ ಕೂಗಲಾಯಿತು.

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರ ಅನಂತಕುಮಾರ ಬ್ಯಾಕೋಡ, ಈರಣ್ಣ ಝೊಂಡ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ನಗರ ಘಟಕದ ಚುನಾಯಿತ ಪ್ರತಿನಿಧಿ ರಾಜು ಕೋಲಕಾರ, ಭಾವಕಣ್ಣಾ ಭಂಗ್ಯಾಗೋಳ ಸೇರಿದಂತೆ ವಿವಿಧ ಕನ್ನಡಪರ ಹೋರಾಟಗಾರರು ಉಪಸ್ಥಿತರಿದ್ದರು.


Leave a Reply