Belagavi

ಕೌಟುಂಬಿಕ ಕಲಹ; ಪತ್ನಿಯನ್ನು ಕೊಡ್ಲಿಯಿಂದ ಕೊಚ್ಚಿ ಕೊಲೆಗೆತ್ನಿಸಿದ ಪತಿ


ಬೆಳಗಾವಿ: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ಪತಿರಾಯ ತನ್ನ ಪತ್ನಿಯನ್ನು ಕೊಡ್ಲಿಯಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಇಂದು (ಗುರುವಾರ 11 ನವೆಂಬರ್) ಬೆಳಗ್ಗೆ 10 ಗಂಟೆ ಸುಮಾರಿಗೆ ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಮತ್ತಿಕೊಪ್ಪ ಗ್ರಾಮದ ಗೌಡ್ರ ಗಲ್ಲಿಯ ಶಾಂತವ್ವಾ ಅರ್ಜುನ ಕೊಳ್ಳಿ (45) ಹಲ್ಲೆಗೋಳಗಾದ ಮಹಿಳೆ. ಶಾಂತವ್ವಾ ಮತ್ತಿಕೊಪ್ಪ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಪತಿ ಅರ್ಜುನ ಮತ್ತು ಆಕೆಯ ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ಉಂಟಾಗಿದೆ. ಇದರಿಂದ ರೊಚ್ಚಿಗೆದ್ದ ಪತಿ ಮನೆಯಲ್ಲಿದ್ದ ಕೊಡ್ಲಿಯಿಂದ ಶಾಂತವ್ವಳ ತಲೆ , ಕೈ ,ಬೆನ್ನು ಸೇರಿದಂತೆ ಇತರ ಅಂಗಾಂಗಗಳ ಮೇಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ಮಾಡಿದ್ದಾಗಿ ತಿಳಿದು ಬಂದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ತಕ್ಷಣ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹಲ್ಲೆ ಮಾಡಿ ಠಾಣೆಗೆ ಹಾಜರಾದ ಭೂಪ..!

ಪತ್ನಿಯ ಮೇಲೆ ಹಲ್ಲೆ ಮಾಡಿದ ಪತಿ ತಕ್ಷಣ ಸಮೀಪದ ನೇಸರಗಿ ಪೋಲೀಸ್ ಠಾಣೆಗೆ ಹೋಗಿ ಹಾಜರಾಗಿದ್ದಾನೆ. ನೇಸರಗಿ ಪೋಲೀಸರು ಇತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.


Leave a Reply