Belagavi

ಚನ್ನರಾಜ ಹಟ್ಟಿಹೊಳಿ ಗೆಲುವಿಗೆ ಕೈಜೋಡಿಸಿ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ


ಯಮಕನಮರಡಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದ್ದು, ಪಕ್ಷದ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಹುಣಸಿಕೊಳ್ಳ ಮಠದ ಸಮುದಾಯ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಯಮಕನಮರಡಿ ಮತಕ್ಷೇತ್ರದ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಒಂದು ಸ್ಥಾನಕ್ಕಾಗಿ ಮಾತ್ರ ಸ್ಪರ್ಧಿಸಲು ಪಕ್ಷ ತೀರ್ಮಾನಿಸಿದ್ದು, ಗೆಲ್ಲುವ ಎಲ್ಲ ಅವಕಾಶವೂ ನಮಗಿದೆ. ಈ ಚುನಾವಣೆಯಲ್ಲಿ ನಾವು ಗೆಲ್ಲಲೇಬೇಕಿದೆ. ಹೀಗಾಗಿ, ಎಲ್ಲರೂ ಒಗ್ಗಟ್ಟಿನಿಂದ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದರು.

ಚನ್ನರಾಜ್ ಹಟ್ಟಿಹೊಳಿ ಪಕ್ಷದ ಅಭ್ಯರ್ಥಿ:

ಚನ್ನರಾಜ್ ಹಟ್ಟಿಹೊಳಿ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿಸಲು ಪಕ್ಷದ ವರಿಷ್ಠರು ಹಾಗೂ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರು ತೀರ್ಮಾನಿಸಿದ್ದೇವೆ. ಆದರೆ, ಇನ್ನೂ ಅಧಿಕೃತ ಘೋಷಣೆ ಆಗಿಲ್ಲ. ಎರಡ್ಮೂರು ದಿನಗಳಲ್ಲಿ ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಲಾಗುವುದು. ಟಿಕೆಟ್ ಅಧಿಕೃತವಾದ ನಂತರ ನ.22 ರಂದು ಚನ್ನರಾಜ್ ಹಟ್ಟಿಹೊಳಿ ಅವರು ಅತ್ಯಂತ ಸರಳ ರೀತಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ನಾಲ್ಕೂವರೆ ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದರು ಕೂಡ ಕಾಂಗ್ರೆಸ್ ಅಭ್ಯರ್ಥಿಗಳು ಸೋಲಬೇಕಾಯಿತು. ಮತಗಳ ವಿಭಜನೆಯಿಂದ ನಾವು ಸೋಲು ಕಾಣಬೇಕಾಯಿತು. ಹೀಗಾಗಿ, ಈ ಬಾರಿ ಒಬ್ಬರೇ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿದ್ದೇವೆ. ಮೂರು ಸಾವಿರಕ್ಕಿಂತ ಹೆಚ್ಚು ಮತಗಳನ್ನು ಪಡೆದರೆ ನಾವು ಜಯಗಳಿಸಲಿದ್ದೇವೆ ಎಂದು ಹೇಳಿದರು.

ಚನ್ನರಾಜ ಹಟ್ಟಿಹೊಳಿಯವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಿ ಪ್ರಚಂಡ ಬಹುಮತಗಳಿಂದ ಆರಿಸಿ ತಂದು, ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡೋಣ ಎಂದು ಅವರು ಹೇಳಿದರು.

ಆಮಿಷಗಳಿಗೆ ಬಲಿಯಾಗಬೇಡಿ:

ನಮ್ಮ ಎದುರಾಳಿಗಳು ಸಾಕಷ್ಟು ಚುನಾವಣೆಗಳನ್ನು ಮಾಡಿದ್ದಾರೆ. ನಿಮ್ಮ ಮೇಲೆ ಪ್ರಭಾವ ಬೀರಲು ಇಲ್ಲಿ ಬಂದು ವಿವಿಧ ರೀತಿಯಲ್ಲಿ ಸರ್ಕಸ್ ಮಾಡುತ್ತಾರೆ. ಆದರೆ, ತಾವು ಅವರ ಆಮಿಷಗಳಿಗೆ ಬಲಿಯಾಗದೇ, ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಪ್ರತಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವತಃ ನಾನೇ ಬಂದು ನಿಮ್ಮ ಸಮಸ್ಯೆಗಳನ್ನು ಆಲಿಸಿ, ಸಭೆಗಳನ್ನು ಮಾಡುತ್ತೇನೆ. ನಿಮ್ಮ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಸತೀಶ್ ಮುಂದೊಂದು ದಿನ ಮುಖ್ಯಮಂತ್ರಿಯಾಗಬೇಕು – ಚನ್ನರಾಜ ಹಟ್ಟಿಹೊಳಿ

ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿಯವರು ಮುಂದೊಂದು ದಿನ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.
ವಿಧಾನಪರಿಷತ್ ಚುನಾವಣೆ ಮುಂಬರುವ ವಿಧಾನಸಭೆಯ ದಿಕ್ಸೂಚಿಯಾಗಬೇಕು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯ್ತಿ ಚುನಾಯಿತ ಪ್ರತಿನಿಧಿಗಳು ಒಟ್ಟಿಗೆ ಕೆಲಸ ಮಾಡೋಣ ಎಂದರು.

ಲೋಕಸಭೆ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿಯವರು ಸ್ಪರ್ಧೆ ಮಾಡಿದಾಗಿನಿಂದ ಬೆಳಗಾವಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚಾಗಿದೆ. ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 18 ಕ್ಷೇತ್ರದಲ್ಲಿ 12 ರಿಂದ 14 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸೋಣವೆಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸತೀಶ್ ಜಾರಕಿಹೊಳಿಯವರು ಬರೀ ಜಿಲ್ಲೆಯ ನಾಯಕರಲ್ಲ, ರಾಜ್ಯ ನಾಯಕರಾಗಿದ್ದಾರೆ. ಕರ್ನಾಟಕ ರಾಜ್ಯಾದ್ಯಂತ ಅವರದೆಯಾದ ಶಿಸ್ತು ಇದೆ. ಮಾನವ ಬಂಧುತ್ವ ವೇದಿಕೆಯನ್ನು ಹುಟ್ಟು ಹಾಕಿ, ಬುದ್ದ, ಬಸವ, ಅಂಬೇಡ್ಕರ್ ಅವರ ಆದರ್ಶಗಳನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.

ಜಿಲ್ಲೆಯ ಜನರು ಸತೀಶ್ ಅಣ್ಣಾ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಆಗಬೇಕೆಂಬ ಆಶಯ ಇದೆ. ಆ ನಿಟ್ಟಿನಲ್ಲಿಯೇ ನಾವು ಕೆಲಸ ಮಾಡೋಣ. ನಾನು ಸಹ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುವೆ ಎಂದು ಭರವಸೆ ನೀಡಿದರು.

ನನಗೆ ಸ್ಪರ್ಧಿಸಲು ಅವಕಾಶ ನೀಡಿದ ಪಕ್ಷದ ಅಧ್ಯಕ್ಷರಾದ ಡಿ. ಕೆ. ಶಿವಕುಮಾರವರಿಗೆ, ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ, ಪಕ್ಷದ ರಾಜ್ಯ ಹಾಗೂ ಜಿಲ್ಲೆಯ ಎಲ್ಲ ನಾಯಕರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಚನ್ನರಾಜ ತಿಳಿಸಿದರು.

ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಯಲ್ಲಪ್ಪಾ ಬುಡ್ರಿ, ರಾಹುಲ್ ಶಿಂಗೆ, ರವೀಂದ್ರ ಜಿಂಡ್ರಾಳೆ, ಚಿಕ್ಕೋಡಿ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಯಲ್ಲಪ್ಪ ಸಿಂಗೆ, ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿ ಬರತಕ್ಕಂತ ಎಲ್ಲ ಗ್ರಾಮ ಪಂಚಾಯತ್ ಗಳ ಸದಸ್ಯರು ಯಮಕನಮರಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಣ್ಣ ಬಿಸಿರೊಟ್ಟಿ, ಕಾಕತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ರಾಮಣ್ಣ ಗುಳ್ಳಿ, ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷರಾದ ಅರುಣ ಕಟಾಂಬಳೆ, ಮಹಾಂತೇಶ ಮಗದುಮ್ಮ, ಸಿದ್ದು ಸು‌ಣಗಾರ, ಮಂಜುನಾಥ ಪಾಟೀಲ, ಫಕೀರವ್ವ ಹಂಚಿನಮನಿ, ರಾಹುಲ್ ಮಾಚಕನೂರ ಸೇರಿ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.


Leave a Reply