Belagavi

ಇಂಜಿನಿಯರಿಂಗ್‌ ಪ್ರವೇಶ ಶುಲ್ಕ ಏರಿಕೆ ಖಂಡಿಸಿ ವಿದ್ಯಾರ್ಥಿಗಳು ಪ್ರತಿಭಟನೆ


ಬೆಳಗಾವಿ: ಸರ್ಕಾರಿ ಕೋಟಾದಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಶುಲ್ಕ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಅಖಿಲ ಭಾರತ್ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಸರ್ಕಾರಿ ಕೋಟಾದಲ್ಲಿ ಇಂಜಿನಿಯರಿಂಗ್ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಏಕಾಏಕಿ 20 ಸಾವಿರ ಫೀಸ್‍ನ್ನು ಹೆಚ್ಚಿಗೆ ಮಾಡಲಾಗಿದೆ. ಇದು ಸಧ್ಯ ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕೂಡಲೇ ಫೀಸ್‍ನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಬೆಳಗಾವಿಯಲ್ಲಿ ಎಬಿವಿಪಿ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ವೀರರಾಣಿ ಚನ್ನಮ್ಮಾಜಿ ವೃತ್ತದಿಂದ ಡಿಸಿ ಕಚೇರಿವರೆಗೂ ಪ್ರತಿಭಟನಾ ರ್ಯಾಲಿ ನಡೆಸಿದ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಎಬಿವಿಪಿಯ ಪೃಥ್ವಿಕುಮಾರ್ ಅವರು ರಾಜ್ಯ ಸರ್ಕಾರ ಇಂಜಿನಿಯರಿಂಗ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಜೊತೆಗೆ ಚೆಲ್ಲಾಟವಾಡುತ್ತಿದೆ. ಕಳೆದ ವರ್ಷ 65-70 ಸಾವಿರ ಆಸುಪಾಸಿನಲ್ಲಿದ್ದ ಇಂಜಿನಿಯರಿಂಗ್ ಶುಲ್ಕ, ಇದೀಗ 85-90 ಸಾವಿರ ರೂಪಾಯಿಗೆ ಏರಿಸಿದ್ದಾರೆ. ಇಡೀ ದೇಶದಲ್ಲಿ ಕರ್ನಾಟಕದಲ್ಲಿಯೇ ಅತೀ ಹೆಚ್ಚು ಬಡ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಸೀಟ್ ಪಡೆದುಕೊಳ್ಳುತ್ತಾರೆ. ಹೊಸ ಶಿಕ್ಷಣ ನೀತಿ ಜಾರಿಗೆ ಬರುತ್ತಿರುವ ಸಂದರ್ಭದಲ್ಲಿ 20 ಸಾವಿರ ರೂಪಾಯಿ ಫೀಸ್‍ನ್ನು ಹೆಚ್ಚಿಗೆ ಮಾಡುವ ಮೂಲಕ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುಕೂಲ ಮಾಡಿಕೊಡುತ್ತಿರುವುದು ಸರಿಯಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಆರ್‍ಎಲ್‍ಎಸ್ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಭದ್ರಕಾಳಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಬಹಳಷ್ಟು ಕಷ್ಟವಿದೆ. ಶ್ರೀಮಂತರು ಹೇಗಾದ್ರೂ ಕಟ್ಟಬಹುದು ಆದರೆ ಬಡವರು ಹೆಚ್ಚಿಗೆ ಫೀಸ್ ಕಟ್ಟಲು ಆಗುವುದಿಲ್ಲ. ಹೀಗಾಗಿ ತಕ್ಷಣವೇ ಫೀಸ್‍ನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುರೇಶ್ ಜಂಗೋಣಿ, ವಿಭಾಗ ಸಂಚಾಲಕ ರೋಹಿತ್ ಉಮನಾಬಾದಿಮಠ, ತಾಲೂಕ ಸಂಚಾಲಕ ಕಿರಣ್ ದುಖಾಂದಾರ, ಕೃಷ್ಣ ಜೋಷಿ,ತನ್ಮಯ, ಪ್ರಶಾಂತ್ ಮುತಾಲಿಕ್, ಅಶ್ವಿನ ಉಮನಾಬಾದಿಮಠ, ಪ್ರಜ್ವಲ್ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಭಾಗಿಯಾಗಿದ್ದರು.


Leave a Reply