Belagavi

ಕನಕದಾಸರನ್ನು ಜಾತಿಗೆ ಸೀಮಿತಗೊಳಿಸಬಾರದು: ಬಾಗೇವಾಡಿ


ಬೆಳಗಾವಿ: “ಕೀರ್ತನೆ-ಉಗಾಭೋಗ-ಪದಗಳ ಮುಖೇನ ಸಮಾಜದ ಅಂಕುಡೊಂಕುಗಳನ್ನು ತಮ್ಮದೇ ಧಾಟಿಯಲ್ಲಿ ಛೇಡಿಸುವ ಮೂಲಕ ಜನಸಾನ್ಯರಲ್ಲಿ ಜಾಗೃತಿ ಮೂಡಿಸಿದ ಮಹಾನ್ ದಾರ್ಶನಿಕರು ಕನಕದಾಸರು. ಅಂಥ ಮಹನೀಯರನ್ನು ಜಾತಿಗೆ ಸೀಮಿತಗೊಳಿಸಬಾರದು” ಎಂದು ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಶಂಕರ ಬಾಗೇವಾಡಿ ಅಭಿಪ್ರಾಯ ಪಟ್ಟರು.

ನಗರದ ಹೊರವಲಯದ ಕಣಬರಗಿಯ ಶ್ರೀ ರವಿಶಂಕರ ವಿದ್ಯಾವರ್ಧಕ ಸಂಸ್ಥೆಯ ಸಮತಾ ಶಾಲೆಯಲ್ಲಿ ಜರುಗಿದ ‘ದಾಸಶ್ರೇಷ್ಠÀ ಕನಕದಾಸರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ಶತ-ಶತಮಾನಗಳಿಂದ ಅಸಮಾನತೆಯ ಮೌಢ್ಯತೆಯಲ್ಲಿ ನರಳುತ್ತಿದ್ದ ನಮ್ಮ ದೇಶದಲ್ಲಿ ಕಾಲ ಕಾಲಕ್ಕೆ ಅನೇಕ ದಾರ್ಶನಿಕರು ಸಮಾನತೆಗಾಗಿ ಹೋರಾಡಿ ಹೊಸ ಕ್ರಾಂತಿಗೆ ನಾಂದಿ ಹಾಡಿದ್ದಾರೆ. ಭಕ್ತಿ ಮಾರ್ಗದಲ್ಲಿದ್ದುಕೊಂಡೇ ಕನಕದಾಸರು ಸಾಮಾಜಿಕ ಮೌಢ್ಯತೆಗಳನ್ನು ವಿಡಂಬಿಸಿದರು. ‘ರಾಮ-ಧಾನ್ಯ ಚರಿತೆಯ’ ಮೂಲಕ ಅನ್ನದ ಅಸಮಾನತೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಜಾಗೃತಿ ಮೂಡಿಸಿದರು. ದೇವರ ನೈವೇದ್ಯದಲ್ಲೂ ರಾಗಿ ಮತ್ತು ಅಕ್ಕಿಯ ನಡುವೆ ಇರುವಂಥ ಅಸಮಾನತೆಯನ್ನು ರಾಮನ ಪಾತ್ರದ ಮುಖೇನ ವಿವರಿಸಿ ಬಡವರ ಆಹಾರವಾದ ರಾಗಿಯೂ ಶ್ರೇಷ್ಠ ಎಂದು ಪ್ರತಿಪಾದಿಸಿದರು.. ನಾವಿಂದು ರಾಗಿಯನ್ನು ಸಿರಿಧಾನ್ಯವನ್ನಾಗಿಸಿದ್ದೇವೆ. ಹೀಗಾಗಿ ಕನಕದಾಸರು ವೈಜ್ಞಾನಿಕ ಚಿಂತನೆಗಳನ್ನು ತಮ್ಮ ಸಾಹಿತ್ಯದ ಮೂಲಕ ಜನಸಾಮಾನ್ಯರಿಗೆ ತಿಳಿಸಿದರು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ‘ಕನಕದಾಸರ ಜೀವನ ಸಾಧನೆ’ ಕುರಿತು ಶ್ರೀಮತಿ ಜಯಶ್ರೀ ನಾಯಕ ಉಪನ್ಯಾಸ ನೀಡಿ, ‘ಭಕ್ತಿಯ ಪರಾಕಾಷ್ಥತೆಯನ್ನು ತಲುಪಿದ ಕನಕದಾಸರನ್ನೇ ಜಾತಿಯ ನೆಲೆಯಲ್ಲಿ ಕಂಡು ಅಂದಿನ ಪುರೋಹಿತಶಾಹಿ ವರ್ಗ ಅವರನ್ನು ನಿರಂತರವಾಗಿ ಅಪಮಾನಿಸುತ್ತಲೇ ಬಂದಿತು. ಅದನ್ನೆಲ್ಲ ಸಹಿಸಿಕೊಂಡು ಕನಕದಾಸರು ವರ್ಗರಹಿತ-ವರ್ಣರಹಿತ ಸಮಾಜದ ನಿರ್ಮಾಣ ಮಾಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಅಂಥವರ ಜೀವನಾದಾರ್ಶ ನಮಗೆಲ್ಲ ಮಾದರಿಯಾಗಬೇಕಿದೆ’ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಕನಕದಾಸರ ಪದಗಳನ್ನು ಹಾಡಿದರು. ಶ್ರೀಮತಿ ತೇಜಸ್ವಿನಿ ಬಾಗೇವಾಡಿ, ಶ್ರೀಮತಿ ರೇಣುಕಾ ಮಜಲಟ್ಟಿ, ಮಲಿಕಜಾನ ಗದಗಿನ, ಶ್ರೀಮತಿ ಅರುಣಾ ಪಾಟೀಲ, ಶ್ರೀಮತಿ ತೇಜಸ್ವಿನಿ ನಾಯ್ಕರ ಶಾಲೆಯ ಪಾಲಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು.
ಶಾಲಾ ಮಕ್ಕಳು ಹಾಡಿದ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ’ ಎಂಬ ಕನಕದಾಸರ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ನೇಹಾ ಮುತಗೇಕರ ಸ್ವಾಗತಿಸಿದರು. ರೇಹಾನ ಕಿಲ್ಲೇದಾರ ನಿರೂಪಿಸಿದರು. ಸೌರಭ ತಳವಾರ ವಂದಿಸಿದರು.


Leave a Reply