Belagavi

ಮೊಟ್ಟೆ ಯೋಜನೆ ಕೈಬಿಡಬೇಡಿ ಎಂದು ಬೆಳಗಾವಿಯಲ್ಲಿ ಪ್ರತಿಭಟನೆ


ಬೆಳಗಾವಿ: ಪೌಷ್ಠಿಕಾಂಶದ ದೃಷ್ಟಿಯಿಂದ ಕರ್ನಾಟಕ ಸರ್ಕಾರ 1ನೇ ತರಗತಿಯಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಮೊಟ್ಟೆಯನ್ನು ಕೊಡುವುದು ಸರಿಯಾದ ಯೋಜನೆಯಾಗಿದ್ದು ಅದನ್ನು ಯಾವುದೇ ಕಾರಣಕ್ಕೂ ಹಿಂತೆಗೆದುಕೊಳ್ಳಬಾರದು ಎಂದು ಬೆಳಗಾವಿಯಲ್ಲಿ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ಪದಾಧಿಕಾರಿಗಳು ಕೈಯಲ್ಲಿ ಮೊಟ್ಟೆ ಹಿಡಿದು ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದ ಅವರು ಶಾಲೆಗಳಲ್ಲಿ ಮೊಟ್ಟೆ ವಿತರಿಸುವ ಯೋಜನೆಯನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು ಒಂದು ಉತ್ತಮ ಯೋಜನೆಯಾಗಿದೆ ಇದರಿಂದ ವಿದ್ಯಾರ್ಥಿಗಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಹಲವೆಡೆ ಈ ಯೋಜನೆಯನ್ನು ಕೈಬಿಡುವಂತೆ ಪ್ರತಿಭಟನೆಗಳು ನಡೆಯುತ್ತಿದ್ದು ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಬಿಡಬಾರದು ಎಂದು ಎಂದು ಕೈಯಲ್ಲಿ ಮೊಟ್ಟೆ ಹಿಡಿದುಕೊಂಡೇ ವಿನೂತನವಾಗಿ ಆಗ್ರಹಿಸಿದ್ದಾರೆ.

ಈ ವೇಳೆ ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ ಶೀಗಿಹಳ್ಳಿ ಮಾತನಾಡಿ ಯಾರಿಗೆ ಮೊಟ್ಟೆ ಬೇಡವೋ ಅವರಿಗೆ ಬೇರೆ ಸಸ್ಯಾಹಾರಿ ವ್ಯವಸ್ಥೆ ಮಾಡಬೇಕು. ಯಾವುದೇ ಕಾರಣಕ್ಕೂ ಮೊಟ್ಟೆ ವಿತರಣೆ ಆದೇಶವನ್ನು ಹಿಂಪಡೆಯಬಾರದು. ಒಂದು ವೇಳೆ ಆದೇಶ ಹಿಂಪಡೆದರೆ ಇಡೀ ರಾಜ್ಯಾಧ್ಯಂತ ದಲಿತಪರ ಸೇರಿದಂತೆ ಇನ್ನಿತರ ಸಂಘಟನೆಗಳ ವತಿಯಿಂದ ಅಧಿವೇಶನ ನಡೆಯುವ ವೇಳೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಶಿವಾ ನಾಯಕ ಪರಶುರಾಮ ಹೆಣಗಿ,ಆದರ್ಶ ದನದಮನಿ, ಕಾರ್ತಿಕ, ಬಾಬು, ಸಚಿನ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply