Belagavi

ಸುಸಜ್ಜಿತ ಪೊಲೀಸ್ ಠಾಣೆ ವಸತಿಗೃಹಗಳ ನಿರ್ಮಾಣಕ್ಕೆ ಕ್ರಮ: ಗೃಹಸಚಿವ ಆರಗ ಜ್ಞಾನೇಂದ್ರ


ಬೆಳಗಾವಿ ಸುವರ್ಣಸೌಧ : ಡಿ.೧೪: ಪೊಲೀಸರಿಗೆ ಸುಸಜ್ಜಿತವಾದ ವಸತಿಗೃಹ ಹಾಗೂ ಕರ್ತವ್ಯ ನಿರ್ವಹಣೆಗೆ ಎಲ್ಲಾ ಅಗತ್ಯ ಸೌಕರ್ಯಗಳಿರುವ ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಸರ್ಕಾರ ಒತ್ತು ನೀಡಿದೆ. ಪ್ರಸಕ್ತ ಸಾಲಿನಲ್ಲಿ ೧೦೦ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ವಿಧಾನಸಭೆಯಲ್ಲಿಂದು ಪ್ರಶ್ನೋತ್ತರ ವೇಳೆಯಲ್ಲಿ ಅರಸೀಕೆರೆ ಶಾಸಕ ಕೆ.ಎಂ.ಶಿವಲಿAಗೇಗೌಡ ಅವರು ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗಂಡಸಿ ಗ್ರಾಮದಲ್ಲಿನ ಹಳೆಯ ಪೊಲೀಸ್ ಠಾಣೆಯು ಶಿಥಿಲಗೊಂಡಿದ್ದ ಪೊಲೀಸ್ ಠಾಣೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕು. ಪೊಲೀಸ್ ಸಿಬ್ಬಂದಿ ಗೌರವಯುತವಾಗಿ ಜೀವನ ನಿರ್ವಹಿಸಲು ಸಾಧ್ಯವಾಗುವಂತೆ ವಸತಿಗೃಹಗಳನ್ನು ನಿರ್ಮಿಸಿಕೊಡುವ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಉತ್ತರ ನೀಡಿ, ಮಾತನಾಡಿದರು.
ಗಂಡಸಿ ಪೊಲೀಸ್ ಠಾಣೆಯ ಹಳೆಯ ಕಟ್ಟಡ ನೆಲಸಮಗೊಳಿಸಲು ಕಳೆದ ಏಪ್ರಿಲ್ ೯ ರಂದು ಅನುಮತಿ ನೀಡಲಾಗಿದೆ. ಜಾಗತಿಕ ಟೆಂಡರ್ ಕರೆಯಲಾಗಿತ್ತು, ಬಿಡ್ ಅರ್ಜಿಗಳು ಸಲ್ಲಿಕೆಯಾಗದ ಹಿನ್ನಲೆಯಲ್ಲಿ ಮ್ಯಾನುಯಲ್ ಟೆಂಡರ್ ಕರೆಯಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಗಂಡಸಿ ಪೊಲೀಸ್ ಠಾಣೆ ಕಟ್ಟಡ ನೆಲಸಮಗೊಳಿಸಲಾಗುವುದು. ರಾಜ್ಯದಲ್ಲಿ ಈ ಹಿಂದೆ ಪ್ರತಿ ವರ್ಷ ೪-೫ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗುತ್ತಿತ್ತು. ಈಗ ಪ್ರತಿ ಆರ್ಥಿಕ ವರ್ಷದಲ್ಲಿ ನೂರು ಪೊಲೀಸ್ ಠಾಣೆಗಳನ್ನು ನಿರ್ಮಿಸಲು ಕ್ರಮವಹಿಸಲಾಗಿದೆ. ಪೊಲೀಸ್ ಸಿಬ್ಬಂದಿಗೆ ಉತ್ತಮ ವಸತಿ ಹಾಗೂ ಕರ್ತವ್ಯ ನಿರ್ವಸುವ ಠಾಣೆಗಳನ್ನು ಉತ್ತಮ ರೀತಿಯಲ್ಲಿ ನಿರ್ಮಿಸಲು ಸರ್ಕಾರ ಬದ್ಧವಾಗಿದೆ ಎಂದರು.
ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ವಿಷಯದಲ್ಲಿ ತಮಗೂ ಸಹಮತವಿದೆ, ಪೊಲೀಸ್ ಗೃಹ ನಿರ್ಮಾಣ ನಿಗಮ ರೂಪಿಸುವ ವಸತಿಗೃಹಗಳ ವಿನ್ಯಾಸ ಪರಿಷ್ಕರಣೆಯಾಗಬೇಕು. ಕಿರಿದಾದ ಇಕ್ಕಟ್ಟಾದ ಕೊಠಡಿಗಳಲ್ಲಿ ಜೀವನ ನಿರ್ವಹಣೆ ಸುಗಮವಾಗಿರುವುದಿಲ್ಲ. ವ್ಯಕ್ತಿ ಸ್ವತಃ ಅನುಕೂಲಕರÀ ಪರಿಸ್ಥಿತಿಯಲ್ಲಿ ಇಲ್ಲದಿದ್ದರೆ, ಇತರರೊಂದಿಗೆ ಉತ್ತಮವಾಗಿ ವರ್ತಿಸಲು ಸಾಧ್ಯವಾಗುವುದಿಲ್ಲವೆಂಬ ಅರ್ಥವುಳ್ಳ ಆಂಗ್ಲ ಗಾದೆಯನ್ನು ಉದಾಹರಿಸಿ, ಪೊಲೀಸ್ ಸಿಬ್ಬಂದಿಯ ವಸತಿ ಗೃಹಗಳ ಸುಧಾರಣೆಗೆ ಒತ್ತಾಯಿಸಿದರು.
ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮಾತನಾಡಿ, ಪೊಲೀಸ್ ಠಾಣೆ ನಿರ್ಮಾಣಕ್ಕೆ ಸಿಎಸ್‌ಆರ್ ನಿಧಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹುಬ್ಬಳ್ಳಿ ಧಾರವಾಡ (ಪೂರ್ವ)ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ಪೊಲೀಸ್ ಠಾಣೆ ನಿರ್ಮಾಣಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಡಿ ಹಣ ನೀಡಿದರೆ, ಅದನ್ನು ಬಳಸಿಕೊಳ್ಳಲು ಅವಕಾಶವಿಲ್ಲ ಎಂದು ಉತ್ತರ ಬಂದಿದೆ ಎಂದು ಸದನಕ್ಕೆ ತಿಳಿಸಿದರು.
ಪ್ರತಿಕ್ರಿಯಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ಪೊಲೀಸ್ ಠಾಣೆ ಹಾಗೂ ವಸತಿಗೃಹಗಳ ನಿರ್ಮಾಣಕ್ಕೆ ಸಿಎಸ್‌ಆರ್ ಹಾಗೂ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನ ಬಳಸಲು ಅವಕಾಶವಿದೆ, ಈ ಕುರಿತು ಸ್ಪಷ್ಟ ಸೂಚನೆ ನೀಡಲಾಗುವುದು ಎಂದರು.


Leave a Reply