Belagavi

ಸುಪ್ರೀಂ ಒಪ್ಪಿಗೆ ಪಡೆದು ೨೫ ಸಾವಿರ ಕೋಟಿ ರೂ.ಗಳ ಮೊತ್ತದಲ್ಲಿ ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿ: ಸಚಿವ ಆಚಾರ ಹಾಲಪ್ಪ


ಬೆಳಗಾವಿ.ಸುವರ್ಣಸೌಧ,ಡಿ.೧೪: ಗಣಿಗಾರಿಕೆಯಿಂದ ಬಾಧಿತವಾಗಿರುವ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ೨೫ ಸಾವಿರ ಕೋಟಿ ರೂ.ಗಳ ಕ್ರಿಯಾಯೋಜನೆ ರೂಪಿಸಲಾಗಿದ್ದು, ಸುಪ್ರೀಂಕೋರ್ಟ್ನ ಅನುಮೋದನೆ ಪಡೆದುಕೊಂಡು ಅಭಿವೃದ್ಧಿಪಡಿಸಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ ಆಚಾರ ಹಾಲಪ್ಪ ಅವರು ವಿಧಾನಪರಿಷತ್‌ನಲ್ಲಿ ತಿಳಿಸಿದರು.
ಸದಸ್ಯ ಪಿ.ಆರ್.ರಮೇಶ ಅವರ ಚುಕ್ಕೆಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು ಸುಪ್ರೀಂಕೋರ್ಟ್ ಆದೇಶದ ಅನ್ವಯ ಬಳ್ಳಾರಿ,ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಾರಿಕೆಯಿಂದ ಬಾಧಿತವಾದ ಪ್ರದೇಶಗಳ ಸಮಗ್ರ ಪರಿಸರ ಅಭಿವೃದ್ಧಿ,ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಮತ್ತು ಗಣಿಗಾರಿಕೆಗೆ ಅವಶ್ಯಕವಾಗಿರುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಂಬAಧಿಸಿದAತೆ ವಿವಿಧ ಇಲಾಖೆಗಳು ಕೈಗೊಳ್ಳಲು ಉದ್ದೇಶಿಸಿರುವ ಅಭಿವೃದ್ಧಿ ಚಟುವಟಿಕೆಗಳನ್ನು ಜಿಲ್ಲಾಡಳಿತ ಗುರುತಿಸಿ ಸರಕಾರದ ಮಟ್ಟದಲ್ಲಿ ಕ್ರೋಢೀಕರಿಸಿ ೨೪,೯೯೬.೭೧ಕೋಟಿ ರೂ.ಗಳ ಮೊತ್ತದ ಕ್ರಿಯಾಯೋಜನೆ ತಯಾರಿಸಿ ೨೦೧೮ರಲ್ಲಿ ಸುಪ್ರೀಂಕೋರ್ಟ್ ಅನುಮೋದನೆಗಾಗಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಯೋಜನೆಗೆ ಶೀಘ್ರ ನ್ಯಾಯಾಲಯದ ಅನುಮೋದನೆ ಪಡೆಯುವ ಸಂಬAಧ ೩ ಬಾರಿ ಹಿರಿಯ ವಕೀಲರು ಮತ್ತು ೦೭ ಬಾರಿ ಸಾಲಿಸಿಟರ್ ಜನರಲ್ ಅವರು ನ್ಯಾಯಾಲಯದ ಮುಂದೆ ಅರಿಕೆ ಮಾಡಿದ್ದಾರೆ. ಕೇಸು ಶೀಘ್ರ ಕೈಗೆತ್ತಿಕೊಳ್ಳುವಂತೆ ಕೋರಿ೦೭ ಮೆನ್ಷನಿಂಣ್ ಅಪ್ಲಿಕೇಶನ್‌ಗಳನ್ನು ಸಲ್ಲಿಸಲಾಗಿದೆ. ನ್ಯಾಯಾಲಯದ ಅನುಮೋದನೆ ನಿರೀಕ್ಷಿಸಲಾಗುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು.
ಈ ಯೋಜನೆಗೆ ಸುಪ್ರೀಂ ಅನುಮೋದನೆ ದೊರೆಯಬೇಕಾಗಿರುವುದರಿಂದ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದಡಿಯಲ್ಲಿ ಈವರೆಗೆ ಯಾವುದೇ ಕಾಮಗಾರಿ/ಯೋಜನೆಗಳನ್ನು ಕೈಗೊಂಡಿರುವುದಿಲ್ಲ. ಅನುಮೋದನೆ ದೊರೆತ ನಚಿತರ ಸುಪ್ರೀಂ ಆದೇಶದಂತೆ ಯೋಜನೆಯ ಅನುಷ್ಠಾನ ಕಾರ್ಯ ಕೈಗೊಳ್ಳಲಾಗುವುದು ಎಂದರು.
ಕಳೆದ ೦೫ ವರ್ಷಗಳಿಂದ ರಾಜ್ಯದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಕ್ರಮಗಣಿಗಾರಿಕೆ ಮತ್ತು ಇತರೆ ಉಲ್ಲಂಘನೆ ಪ್ರಕರಣಕ್ಕೆ ಸಂಬAಧಿಸಿದAತೆ ದಂಡವಸೂಲಿ ಮಾಡಲಾಗಿದೆ ಮತ್ತು ಗಣಿಗಾರಿಕೆ,ದಾಸ್ತಾನು ಮತ್ತು ಸಾಗಾಣಿಕೆ ಉಲ್ಲಂಘನೆಯಡಿ ೨೦೧೭ರಿಂದ ಇಲ್ಲಿಯವರೆಗೆ ೧೯ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹೊಸ ಮರಳು ನೀತಿ ೨೦೨೦ರನ್ವಯ ಮರಳು ಗಣಿಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ಕರ್ನಾಟಕ ಉಪಖನಿಜ ರಿಯಾಯ್ತಿ(ತಿದ್ದುಪಡಿ) ನಿಯಮಗಳು ೨೦೨೧ನ್ನು ಜಾರಿಗೊಳಿಸಲಾಗಿದೆ ಎಂದು ಸದಸ್ಯೆ ಎಸ್.ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಉತ್ತರಿಸಿದರು.
ಕೊಡಗು ಜಿಲ್ಲೆಯಲ್ಲಿ ನಿರ್ಮಾಣ ಕಾಮಗಾರಿಗಳಿಗೆ ಬೇಡಿಕೆಗನುಗುಣವಾಗಿ ಮರಳು ಪೂರೈಸಲಾಗುತ್ತಿದೆ ಎಂದು ವಿವರಿಸಿದ ಅವರು ಕೊಡಗು ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಹಾಗೂ ಸರಕಾರಿ ನಿರ್ಮಾಣ ಕಾಮಗಾರಿಗಳಿಗೆ ಮರಳು ಕೊರತೆ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
*ಬೇಡಿಕೆಗೆ ತಕ್ಕಂತೆ ಮರಳು ಪೂರೈಸಲು ಹೊಸ ಮರಳು ನೀತಿ: ಸಾರ್ವಜನಿಕರಿಗೆ ಹಾಗೂ ಸರಕಾರಿ ಕಾಮಗಾರಿಗಳಿಗೆ ಬೇಡಿಕೆಗೆ ತಕ್ಕಂತೆ ನಿಗದಿತ ದರದಲ್ಲಿ ಮರಳು ಪೂರೈಕೆ ಮಾಡಲು ೨೦೨೦ ಮೇ ೦೫ ರಂದು ಹೊಸ ಮರಳು ನೀತಿಯನ್ನು ಜಾರಿಗೆ ತರಲಾಗಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವ ಆಚಾರ ಹಾಲಪ್ಪ ಅವರು ಪರಿಷತ್‌ನಲ್ಲಿ ತಿಳಿಸಿದ್ದಾರೆ.
ಮಹಾಂತೇಶ ಕವಟಗಿಮಠ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಅವರು ಗ್ರಾಪಂಗಳ ಮೂಲಕ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಟನ್ ಮರಳಿಗೆ ರೂ.೩೦೦ ಹಾಗೂ ಕೆಎಸ್‌ಎಂಸಿಎಲ್ ಮತ್ತು ಹಟ್ಟಿ ಚಿನ್ನದ ಗಣಿ ಕಂಪನಿ ಮೂಲಕ ವಿಲೇವಾರಿ ಮಾಡುವ ಪ್ರತಿ ಮೆಟ್ರಿಕ್ ಟನ್‌ಗೆ ೭೦೦ ರೂ.ನಿಗದಿಪಡಿಸಲಾಗಿದೆ ಎಂದರು.
ನಿಯಮಾನುಸಾರ ಮರಳು ಸಾಗಾಣಿಕೆಗೆ ಪರವಾನಿಗೆ ಪಡೆದು ಮರಳು ದಾಸ್ತಾನು ಪಡೆದು ಮರಳು ದಾಸ್ತಾನು ಮಾಡಿ ಸ್ವಂತ ಮನೆ ಕಟ್ಟಿಕೊಳ್ಳುವ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಇಲಾಖಾ ಅಧಿಕಾರಿಗಳು ತೊಂದರೆ ನೀಡುತ್ತಿರುವ ಬಗ್ಗೆ ಯಾವುದೇ ದೂರುಗಳು ಸ್ವೀಕೃತವಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


Leave a Reply