Belagavi

ಮಳೆ ಹಾನಿಗೆ ತುತ್ತಾದ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಆದ್ಯತೆ: ಸಚಿವ ಬಿ.ಸಿ. ನಾಗೇಶ್


ಬೆಳಗಾವಿ ಸುವರ್ಣಸೌಧ,ಡಿ.೧೬: ಚಾಮರಾಜನಗರ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತಹ ಮಳೆಹಾನಿಗೆ ತುತ್ತಾದ ಶಾಲಾ ಕೊಠಡಿಗಳ ದುರಸ್ತಿ ಹಾಗೂ ಅಗತ್ಯವಿದ್ದರೆ ಪುನರ್ ನಿರ್ಮಾಣಕ್ಕೆ ಸರ್ಕಾರ ಕ್ರಮವಹಿಸಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ ಸಚಿವರಾದ ಬಿ.ಸಿ. ನಾಗೇಶ್ ಅವರು ಹೇಳಿದರು.
ಚಾಮರಾಜನಗರ ಶಾಸಕ ಸಿ. ಪುಟ್ಟರಂಗಶೆಟ್ಟಿ ಇವರ ಪ್ರಶ್ನೆಗೆ ವಿಧಾನಸಭೆಯಲ್ಲಿಂದು ಉತ್ತರಿಸಿದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ವಿಶೇಷ ಮಳೆಯ ಕಾರಣ ರಾಜ್ಯಾದ್ಯಂತಹ ಶಾಲಾ ಕೊಠಡಿಗಳಿಗೆ ತೀವ್ರ ಹಾನಿಯಾಗಿರುವುದು ಗಮನಕ್ಕೆ ಬಂದಿದೆ. ಹಾನಿಯಾದ ಶಾಲಾ ಕೊಠಡಿಗಳನ್ನು ಮೂರು ವರ್ಗಗಳನ್ನಾಗಿ ವಿಂಗಡಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ಅನುದಾನ ಒದಗಿಸಿ ದುರಸ್ತಿಗೆ ಕ್ರಮವಹಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಶಾಸಕರಾದ ಸಿ.ಟಿ. ರವಿ ಅವರು ಮಾತನಾಡಿ, ಅಕಾಲಿಕ ಮಳೆಗೆ ರಾಜ್ಯಾದ್ಯಂತಹ ಶಾಲಾ ಕೊಠಡಿಗಳು ತೀವ್ರ ಹಾನಿಯಾಗಿದ್ದು, ೧೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳ ಸಮೀಕ್ಷೆ ನಡೆಸಿ, ಹಾನಿಯಾದ ಈ ಶಾಲೆಗಳ ಕೊಠಡಿಗಳ ತುರ್ತು ದುರಸ್ತಿಗೆ ಆದ್ಯತೆ ನೀಡುವಂತೆ ಮನವಿ ಮಾಡಿಕೊಂಡರು.
ಕಳೆದ ಮೂರು ವರ್ಷದಲ್ಲಿ ವಿವಿಧ ಯೋಜನೆಯಡಿ ಚಾಮರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಥಿಲವಾಗಿರುವ ಶಾಲೆಗಳ ನವೀಕರಣಗೊಳಿಸಲು ಹಾಗೂ ಬಳಸಲು ಯೋಗ್ಯವಲ್ಲದ ಶಾಲಾಕೊಠಡಿ ಕೆಡವಿ ಮರು ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ೩೬೭.೨೩ ಲಕ್ಷ ರೂ. ಹಾಗೂ ೨೦೧೯-೨೦ ನೇ ಸಾಲಿನಲ್ಲಿ ೧೩೧.೩೩ ಲಕ್ಷ ಹಾಗೂ ೨೦೨೦-೨೧ನೇ ಸಾಲಿನಲ್ಲಿ ೨೦೬.೧೫ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ೭೪ ಕೊಠಡಿಗಳ ನಿರ್ಮಾಣ, ೦೯ ಕೊಠಡಿಗಳ ಮರು ನಿರ್ಮಾಣ, ೮೮ ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮವಹಿಸಲಾಗಿದೆ.
೨೦೨೧-೨೨ನೇ ಸಾಲಿನಲ್ಲಿ ಶಾಲೆಗಳ ನವೀಕರಣಕ್ಕಾಗಿ ಜಿಲ್ಲಾ ವಿಪತ್ತು ನಿರ್ವಹಣಾ ಕಾಯ್ದೆಯಡಿ ೧೩೫ ಲಕ್ಷ ರೂ. ವೆಚ್ಚದಲ್ಲಿ ೬೮ ಕೊಠಡಿಗಳು ಹಾಗೂ ಜಿಲ್ಲಾ ಪಂಚಾಯತ್ ಸೇರ್ಪಡೆ ಮತ್ತು ಮಾರ್ಪಾಡು ಯೋಜನೆಯಡಿ ೨೮ ಲಕ್ಷ ರೂ. ವೆಚ್ಚದಲ್ಲಿ ೧೪ ಕೊಠಡಿಗಳಿಗೆ ಅನುದಾನ ಕೋರಲಾಗಿದೆ. ಅಮೃತ ಶಾಲಾ ಸೌಲಭ್ಯ ಯೋಜನೆಯಡಿ ೧೭ ಶಾಲೆಗಳಿಗೆ ೧೭೦ ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಹಾಗೂ ಸರ್ಕಾರಿ ಶಾಲೆಗಳ ತುರ್ತು ಕೊಠಡಿ ದುರಸ್ತಿ ನಿರ್ಮಾಣ ಮತ್ತು ಕಾಮಗಾರಿ ೬ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿರುವುದಾಗಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಪುಟ್ಟರಂಗಶೆಟ್ಟಿ ಅವರು ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ಕಪ್ಪು ಮಣ್ಣು ಇರುವುದರಿಂದ ಒಂದು ಶಾಲಾಕೊಠಡಿ ನಿರ್ಮಾಣಕ್ಕೆ ನಿಗದಿಯಾದ ಅನುದಾನ ಸಾಕಾಗುವುದಿಲ್ಲ ಎಂದು ಗಮನ ಸೆಳೆದರು. ಈ ಕುರಿತಂತೆ ಉತ್ತರಿಸಿದ ಸಚಿವರು ವಿಶೇಷವಾಗಿ ಚಾಮರಾಜನಗರಕ್ಕೆ ಇಂಜನಿಯರ್ ತಂಡ ಕಳುಹಿಸಿ ಮಣ್ಣಿನ ಗುಣ ಪರೀಕ್ಷಿಸಿ ಹೆಚ್ಚುವರಿ ಅನುದಾನ ಒದಗಿಸಲು ಕ್ರಮವಹಿಸಲಾಗುವುದು. ಹೆಚ್ಚುವರಿ ಅನುದಾನವನ್ನು ಜಿಲ್ಲಾ ಪಂಚಾಯತ್ ಹಾಗೂ ಉದ್ಯೋಗ ಖಾತರಿ ಯೋಜನೆಯ ಅನುದಾನ ಬಳಕೆ ಮಾಡಬಹುದಾಗಿದೆ ಎಂದರು.


Leave a Reply