Belagavi

ಮಿಮ್ಸ್ ಅತಿಕ್ರಮಣ ತೆರವು ಶೀಘ್ರ: ಸಚಿವ ಡಾ. ಕೆ. ಸುಧಾಕರ


ಬೆಳಗಾವಿ ಸುವರ್ಣಸೌz: ಡಿ.೧೬: ೨೦೧೮-೧೯ ನೇ ಸಾಲಿನ ಬಜೆಟ್ ಘೋಷಣೆಯನ್ವಯ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಬೋಧನಾ ಆಸ್ಪತ್ರೆಯನ್ನು ೫೫೦ ರಿಂದ ೮೦೦ ಹಾಸಿಗೆಗಳ ಸಾಮರ್ಥ್ಯಕ್ಕೆ ಮೇಲ್ದರ್ಜೆಗೇರಿಸಲು ೩೦ ಕೋಟಿ ರೂ.ಅನುದಾನ ಘೋಷಿಸಲಾಗಿದೆ. ಅತಿಕ್ರಮಣ ಮಾಡಿರುವ ಸ್ಲಂ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಿಮ್ಸ್ ಜಾಗೆಯನ್ನು ತೆರವುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿಯೇ ಸಭೆ ನಡೆಸಲಾಗುವುದು ಎಂದು ಆರೋಗ್ಯ,ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಮಂಡ್ಯ ಶಾಸಕ ಎಂ.ಶ್ರೀನಿವಾಸ ಅವರ ಪ್ರಶ್ನೆಗೆ ಉತ್ತರ ಒದಗಿಸಿ ಅವರು ಮಾತನಾಡಿದರು.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಜಾಗೆಯನ್ನು ಸ್ಲಂ ನಿವಾಸಿಗಳು ಅತಿಕ್ರಮಣ ಮಾಡಿಕೊಂಡಿದ್ದಾರೆ.ಈ ನಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಅತಿಕ್ರಮಣ ತೆರವುಗೊಳಿಸಲು ಕೋರಿ ಜಿ.ಟಿ.ರವೀಂದ್ರಕುಮಾರ ಅವರು ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಅತಿಕ್ರಮಣ ಮಾಡಿರುವ ಸ್ಲಂ ನಿವಾಸಿಗಳಿಗೆ ಬೇರೆ ಜಾಗೆಯಲ್ಲಿ ಪುನರ್ವಸತಿ ಕಲ್ಪಿಸಲು ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯ ಆಯುಕ್ತರು ಮತ್ತು ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಲಾಗಿದೆ. ಈಗಾಗಲೇ ೬ ಎಕರೆ ಜಾಗದಲ್ಲಿ ಮನೆಗಳ ನಿರ್ಮಾಣ ಕಾರ್ಯ ಶೇ.೮೦ ರಷ್ಟು ಮುಕ್ತಾಯವಾಗಿದೆ. ಇನ್ನು ಆರು ತಿಂಗಳಲ್ಲಿ ಪೂರ್ಣ ಪ್ರಮಾಣದ ಮನೆಗಳನ್ನು ನಿರ್ಮಿಸಿ ಸ್ಲಂ ನಿವಾಸಿಗಳನ್ನು ತೆರವುಗೊಳಿಸಿ, ಮಿಮ್ಸ್ ಪ್ರದೇಶವನ್ನು ಹಸ್ತಾಂತರಿಸಲಾಗುವುದು ಎಂದು ಮಂಡ್ಯದ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಕುರಿತು ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು,ಸ್ಥಳೀಯ ಶಾಸಕರ ಉಪಸ್ಥಿತಿಯಲ್ಲಿ ಶೀಘ್ರ ಸಭೆ ನಡೆಸಲಾಗುವುದು. ಮಿಮ್ಸ್ ಬೋಧಕ ಆಸ್ಪತ್ರೆ ನಿರ್ಮಾಣಕ್ಕೆ ಹಣದ ಕೊರತೆ ಇಲ್ಲ.ಮಂಜೂರಾಗಿರುವ ೩೦ ಕೋಟಿ ರೂ.ಗಳಲ್ಲಿ ಈಗಾಗಲೇ ೧೦ ಕೋಟಿ ರೂ.ಬಿಡುಗಡೆ ಮಾಡಲಾಗಿದೆ.ಅದು ಬಳಕೆಯಾದ ಕೂಡಲೇ ಉಳಿದ ೨೦ ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಸಚಿವರು ಸದನದಲ್ಲಿ ವಿವರಿಸಿದರು.
ಮಾರ್ಚ್ ಅಂತ್ಯದೊಳಗೆ ಹುಣಸೂರು ಸಾರ್ವಜನಿಕ ಆಸ್ಪತ್ರೆ ಸೇವೆಗೆ ಮುಕ್ತ; ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ೨೫ ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ೧೦೦ ಹಾಸಿಗೆಗಳ ಸಾರ್ವಜನಿಕ ಆಸ್ಪತ್ರೆ ಮಾರ್ಚ್ ಅಂತ್ಯದೊಳಗೆ ಪೂರ್ಣಗೊಂಡು ಸೇವೆಗೆ ಮುಕ್ತವಾಗಲಿದೆ ಎಂದು ಆರೋಗ್ಯ,ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಹೇಳಿದರು.
ವಿಧಾನಸಭೆಯ ಪ್ರಶ್ನೋತ್ತರ ವೇಳೆಯಲ್ಲಿಂದು ಹುಣಸೂರು ಶಾಸಕ ಮಂಜುನಾಥ ಹೆಚ್.ಪಿ. ಅವರ ಪ್ರಶ್ನೆಗೆ ಉತ್ತರ ಒದಗಿಸಿ ಅವರು ಮಾತನಾಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆರ್‌ಐಡಿಎಫ್ ನಬಾರ್ಡ ಅನುದಾನದಡಿ ೨೫ ಕೋಟಿ ರೂ.ವೆಚ್ಚದಲ್ಲಿ ಹುಣಸೂರಿನಲ್ಲಿ ತಾಲ್ಲೂಕು ಮಟ್ಟದ ೧೦೦ ಹಾಸಿಗೆಗಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ಕೈಗೊಳ್ಳಲಾಗಿದೆ.ಕರಾರಿನ ಪ್ರಕಾರ ೧೮ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು.ನಿವೇಶನ ಹಸ್ತಾಂತರದಲ್ಲಿ ವಿಳಂಬ,
ಹೆಚ್ಚುವರಿಯಾಗಿ ಸೆಲ್ಲಾರ್ ಮಹಡಿ ನಿರ್ಮಾಣ,ಕೋವಿಡ್-೧೯ ರ ಮೊದಲ ಮತ್ತು ಎರಡನೇ ಅಲೆಗಳಲ್ಲಿ ಜಾರಿಯಾದ ಲಾಕ್‌ಡೌನ್ ಕಾರಣಗಳಿಂದ ಕಾಮಗಾರಿ ವಿಳಂಬವಾಗಿದೆ.ಬರುವ ಮಾರ್ಚ್ ಅಂತ್ಯದೊಳಗೆ ಕಾಮಗಾರಿ ಪೂರ್ನಗೊಳಿಸಿ ಸೇವೆಗೆ ಲೋಕಾರ್ಪಣೆ ಮಾಡಲಾಗುವುದು ಎಂದರು.


Leave a Reply