Belagavi

ಬ್ಯಾಡಗಿ ತಾಲೂಕು ಶಾಲಾ ಕೊಠಡಿ ನಿರ್ಮಾಣ ಬಾಕಿ ಹಣ ಬಿಡುಗಡೆ


ಬೆಳಗಾವಿ ಸುವರ್ಣಸೌಧ,ಡಿ.೧೬.-ಹಾವೇರಿ ಜಿಲ್ಲೆಯ ಬ್ಯಾಡಗಿ ವಿಧಾನ ಸಭಾ ಕ್ಷೇತ್ರದಲ್ಲಿ ೨೦೧೮-೧೯ನೇ ಸಾಲಿನಲ್ಲಿ ವಿಶೇಷ ಪ್ಯಾಕೇಜ್‌ದಡಿ ನಿರ್ಮಾಣ ಮಾಡಿರುವ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರಿಗೆ ಪಾವತಿಸಬೇಕಾದÀ ಬಾಕಿ ಹಣವನ್ನು ಶೀಘ್ರವೇ ಬಿಡುಗಡೆ ಮಾಡಲಾಗುವುದೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಖಾತೆ ಸಚಿವರಾದ ಬಿ.ಸಿ. ನಾಗೇಶ್ ಅವರು ತಿಳಿಸಿದರು.
ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿರೂಪಾಕ್ಷಪ್ಪ ಆರ್. ಬಳ್ಳಾರಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು ಬ್ಯಾಡಗಿ ವಿಧಾನಸಭಾ ಕ್ಷೇತ್ರದಲ್ಲಿ ೨೦೧೮-೧೯ನೇ ಸಾಲಿನ ಮೂರು ವರ್ಷಗಳ ವಿಶೇಷ ಪ್ಯಾಕೇಜ್ ಯೋಜನೆಯಡಿ ೨೪ ಶಾಲೆಗಳ ೫೦ ಕೊಠಡಿಗಳ ನಿರ್ಮಾಣಕ್ಕೆ ೫೭೬.೩೫ ಲಕ್ಷ ರೂ.ಗಳ ಅನುದಾನ ನಿಗದಿಯಾಗಿದ್ದು, ಎರಡು ಕಂತುಗಳಲ್ಲಿ ರೂ. ೩೮೪ ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್ ಪರಿಣಾಮದಿಂದ ಆರ್ಥಿಕ ನಿರ್ಬಂಧನೆ ಕಾರಣ ಬಾಕಿ ಅನುದಾನ ಬಿಡುಗಡೆಯಾಗಿರುವುದಿಲ್ಲ. ಆರ್ಥಿಕ ವರ್ಷಾಂತ್ಯ ಮಾರ್ಚ್ ೨೦೨೨ ರೊಳಗಾಗಿ ಬಾಕಿ ಉಳಿದಿರುವ ೧೯೨.೩೫ ಲಕ್ಷ ರೂ. ಅನುದಾನವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.
ಬ್ಯಾಡಗಿ ತಾಲೂಕಿನಲ್ಲಿ ಕೊರತೆ ಇರುವ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಗಮನಹರಿಸಿದೆ. ೨೦೧೮-೧೯ನೇ ಸಾಲಿನಲ್ಲಿ ೫೭೬.೩೫ ಲಕ್ಷ ರೂ. ೫೦ ಶಾಲಾ ಕೊಠಡಿ, ೨೦೧೯-೨೦ನೇ ಸಾಲಿನಲ್ಲಿ ಆರ್.ಐ.ಡಿ.ಎಫ್- ೨೫ ಯೋಜನೆಯಡಿ ೩೧೨ ಲಕ್ಷ ರೂ.ಗಳ ವೆಚ್ಚದಲ್ಲಿ ೨೫ ಶಾಲಾ ಕೊಠಡಿ, ೨೦೨೦-೨೧ನೇ ಸಾಲಿನಲ್ಲಿ ರಾಜ್ಯ ಬಂಡವಾಳ ವೆಚ್ಚ ಯೋಜನೆಯಡಿ ೨೬.೩೫ ಲಕ್ಷ ರೂ.ಗಳ ವೆಚ್ಚದಲ್ಲಿ ೨ ಶಾಲಾಕೊಠಡಿಗಳು ನಿರ್ಮಾಣ ಮಾಡಲಾಗಿದೆ. ಅನುದಾನದ ಲಭ್ಯತೆ ಮತ್ತು ಅಗತ್ಯತೆಗೆ ಅನುಗುಣವಾಗಿ ಕ್ಷೇತ್ರದಲ್ಲಿ ಅಗತ್ಯವಿರುವ ಶಾಲಾ ಕೊಠಡಿಯನ್ನು ಹಂತ ಹಂತವಾಗಿ ನಿರ್ಮಾಣ ಮಾಡುವುದಾಗಿ ಸಚಿವರು ಭರವಸೆ ನೀಡಿದರು.


Leave a Reply