Belagavi

ಅತಿಥಿ ಉಪನ್ಯಾಸಕರ ಖಾಯಂಮಾತಿ-ಉನ್ನತ ಸಮಿತಿ ವರದಿ ನಂತರ ಕ್ರಮ-ಸಚಿವ ಡಾ.ಅಶ್ವಥ ನಾರಾಯಣ


ಬೆಳಗಾವಿ. ಸುವರ್ಣಸೌಧ,ಡಿ.೧೭: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆ ಕಾಲಿಕ ಉಪನ್ಯಾಸಕರ ಖಾಯಂಮಾತಿ ಕುರಿತಂತೆ ಸರ್ಕಾರ ಈಗಾಗಲೇ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಿದೆ. ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ, ಜೈವಿಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಡಾ.ಅಶ್ವಥನಾರಾಯಣ ಅವರು ಸದನಕ್ಕೆ ತಿಳಿಸಿದರು.
ವಿಧಾನ ಸಭೆಯಲ್ಲಿಂದು ಶೂನ್ಯ ವೇಳೆಯಲ್ಲಿ ದೆಹಲಿ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರೆ ಕಾಲಿಕ ಉಪನ್ಯಾಸಕರ ಖಾಯಂಮಾತಿ ಹಾಗೂ ವೇತನ ಹೆಚ್ಚಳ ಕುರಿತಂತೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರಿಸಿದ, ಅವರು ರಾಜ್ಯದಲ್ಲಿ ೪೩೦ ಸರ್ಕಾರಿ ಪದವಿ ಕಾಲೇಜಿನಲ್ಲಿ ೧೪೫೬೪ ಜನ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಉಪನ್ಯಾಸಕರನ್ನು, ಕಾರ್ಯಭಾರ ಆಧರಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆದಾಗ್ಯೂ ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರ ಸಹಾನುಭೂತಿಯಿಂದ ಇದೆ. ಅವರ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ಸರ್ಕಾರ ಮಾಡಿದೆ. ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ದಿನಾಂಕ ೧೫-೧೨-೨೦೨೧ ರಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ, ಆರ್ಥಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.


Leave a Reply