Belagavi

ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ


ಬೆಳಗಾವಿ : ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಶುಕ್ರವಾರ ಎಐಟಿಯುಸಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಈಗಾಗಲೇ ನಿವೃತ್ತರಾಗಿರುವ 432 ಕಾರ್ಯಕರ್ತೆಯರು ಮತ್ತು 1036 ಸಹಾಯಕಿಯರು ಕ್ರಮವಾಗಿ 50 ಸಾವಿರ ಹಾಗೂ 30 ಸಾವಿರ ರೂ.ಗಳನ್ನು ಬಿಡುಗಡೆ ಮಾಡಿಲ್ಲ. ಇಲಾಖೆಯ ಪ್ರಸ್ತಾವನೆ ಸಲ್ಲಿಸಿದರೂ ಆರ್ಥಿಕ ಇಲಾಖೆ ಅನುಮತಿ ನೀಡದೆ ನಿರಾಕರಿಸಿದೆ ಎಂದು ತಿಳಿದು ಬಂದಿದೆ. ಕೂಡಲೇ ತುರ್ತಾಗಿ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಕಳೆದ‌ 2013 ರಿಂದ ಇಲ್ಲಿಯವರೆಗೆ ಸುಮಾರು 200 ಜನ ಕಾರ್ಯೆಕರ್ತೆಯರು ಹಾಗೂ ಸಹಾಯಕಿಯರು ಮೃತಪಟ್ಟಿದ್ದಾರೆ‌. ಅವರ ಕುಟುಂಬಕ್ಕೆ ಸಿಗಬೇಕಾಗಿದ್ದ 50 ಸಾವಿರ ರೂ. ಪರಿಹಾರ ಧನ ಸಹಾಯಕ ಪಾವತಿಸಿಲ್ಲ. ಸುಮಾರು 25 ಜನ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವೈದ್ಯಕೀಯ ಪರಿಹಾರಧನಕ್ಕಾಗಿ ಅರ್ಜಿ ಸಲ್ಲಿಸಿದ್ದು, 50 ಸಾವಿರ ರೂ.ಗಳ ವೈದ್ಯಕೀಯ ಪರಿಹಾರ ಧನವನ್ನು ಪಾವತಿಸಿಲ್ಲ ಜತೆಗೆ ಬಹುತೇಕ ಅಂಗನವಾಡಿ ಸಿಬ್ಬಂದಿಯವರಿಗೆ ವೈದ್ಯಕೀಯ ಪರಿಹಾರ ಧನ ಪಡೆಯುವ ಮಾಹಿತಿ ಗೊತ್ತಿಲ್ಲ‌. ಆದ್ದರಿಂದ ತುರ್ತಾಗಿ ಹಣ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು ಸೇವಾ ಹಿರಿಯನದ ಹೊರತಾಗಿ ಒಂದೇ ಮೊತ್ತದ ಗೌರವಧನ ಪಡೆಯುತ್ತಿದ್ದಾರೆ. ದಶಕಗಳಿಂದ ಸೇವೆ ಸಲ್ಲಿಸಿದವರು ಹಾಗೂ ಹೊಸದಾಗಿ ಸೇವೆಗೆ ಸೇರಿದವರಿಗೂ ಒಂದೇ ಮೊತ್ತದ ಗೌರವ ಧನ ಸಿಗುತ್ತಿದೆ. ಇದು ತಾರತಮ್ಯದ ಕ್ರಮವಾಗಿದೆ ಇದನ್ನು ಸರಕಾರ ಸರಿಪಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಪೋಷಣ್ ಅಭಿಯಾನ ಮುದ್ರಿತ ಸೀರೆ ವಿತರಣೆ ನಿಲ್ಲಿಸಿ ಸಮವಸ್ತ್ರ ವಿತರಿಸಬೇಕು, ಮಿನಿ ಅಂಗನವಾಡಿ ಕೇಂದ್ರಗಳಿಗೆ ಸಹಾಯಕಿಯರನ್ನು ತುರ್ತಾಗಿ ನೇಮಕ ಮಾಡಿಕೊಳ್ಳಬೇಕು. ತೀವ್ರತರ ಅನಾರೋಗ್ಯ ಪೀಡಿತ, ಅಶಕ್ತರಿಗೆ ಪರಿಹಾರ ನೀಡಿ ಬಿಡುಗಡೆಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಗೆ ಮನವಿ ಸಲ್ಲಿಸಿದರು.

ಅಷ್ಟೆ ಅಲ್ಲದೇ ಮೊಬೈಲ್ ಬಳಕೆಯಿಂದ ಉಂಟಾಗಿರುವ ತೊಂದರೆಯನ್ನು ಸರಕಾರ ನಿವಾರಣೆ ಮಾಡಬೇಕೆಂದು ಆಗ್ರಹಿದ್ದಾರೆ. ಎನ್‌.ಶಿವಣ್ಣ, ಎಂ.ಮಂಜಮ್ಮ, ಎಂ.ಬಿ.ಶಾರದಮ್ಮ, ಕೆ.ಸಿ.ವಿಜಯಕುಮಾರಿ, ಸುರೇಖಾ ದೇಸಾಯಿ, ದ್ರಾಕ್ಷಾಯಣಿ ದೊಡಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply