Belagavi

ರೈತರ ಬೆಳೆ ಪರಿಹಾರ ಧನದಲ್ಲಿ ಹೆಚ್ಚಳ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಳಗಾವಿ, ಸುವರ್ಣಸೌಧ ಡಿ.೨೦; ಅತಿವೃಷ್ಟಿಯಿಂದ ಹಾನಿಗೀಡಾಗುವ ರೈತರ ಬೆಳೆಗಳಿಗೆ ನೀಡಲಾಗುತ್ತಿರುವ ಪರಿಹಾರದ ಮೊತ್ತವನ್ನು ಗಣನೀಯವಾಗಿ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿಂದು ತಿಳಿಸಿದರು.
ಅತಿವೃಷ್ಟಿ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಪ್ರಸ್ತುತ ನೀರಾವರಿ ವ್ಯಾಪ್ತಿಯಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ ೧೩೫೦೦ ರೂ. ನೀಡಲಾಗುತ್ತಿದೆ. ಇದಕ್ಕೆ ಹೆಚ್ಚುವರಿಯಾಗಿ ೧೧೫೦೦ ರೂ. ನೀಡಲು ನಿರ್ಧರಿಸಿದ್ದು, ಇದರಿಂದ ರೈತರಿಗೆ ಹೆಕ್ಟೇರ್‌ಗೆ ೨೫೫೦೦ ರೂ ದೊರೆಯಲಿದೆ. ಒಣ ಬೇಸಾಯ ಜಮೀನಿನಲ್ಲಿ ಬೆಳೆ ಹಾನಿಗೆ ಪ್ರತಿ ಹೆಕ್ಟೇರ್‌ಗೆ ೬೮೦೦ ರೂ ನೀಡಲಾಗುತ್ತಿದ್ದು, ಹೆಚ್ಚುವರಿಯಾಗಿ ಇನ್ನೂ ೬೮೦೦ ರೂ. ನೀಡಲು ತೀರ್ಮಾನಿಸಲಾಗಿದೆ.
ಅತಿವೃಷ್ಟಿಯಿಂದ ೧೨.೬೯ ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಬೆಳೆ ಹಾನಿ ಉಂಟಾಗಿದ್ದು ಪ್ರತಿಯೊಬ್ಬ ರೈತರ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಜಮಾ ಮಾಡಲಾಗುತ್ತಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೆಚ್ಚುವರಿಯಾಗಿ ೧೨೦೦ ಕೋಟಿ ರೂ. ಹೊರೆ ಉಂಟಾಗಲಿದೆ ಎಂದು ಅವರು ಹೇಳಿದರು.
ಇದೇ ರೀತಿ ಅತಿವೃಷ್ಟಿಯಿಂದ ಹಾನಿಗೀಡಾದ ತೋಟಗಾರಿಕಾ ಬೆಳೆಗಳಿಗೆ ಪ್ರಸ್ತುತ ಹೆಕ್ಟೇರ್‌ಗೆ ೧೮ ಸಾವಿರ ರೂ. ಪರಿಹಾರ ನೀಡಲಾಗುತ್ತಿದ್ದು, ಇದಕ್ಕೆ ಹೆಚ್ಚುವರಿಯಾಗಿ ೧೦ಸಾವಿರ ರೂ. ನೀಡಲು ನಿರ್ಧರಿಸಲಾಗಿದೆ ಎಂದರು.
ಬೆಳಗಾವಿ ವಿಭಾಗದಲ್ಲಿ ೨೦೧೯-೨೦ನೇ ಸಾಲಿನಲ್ಲಿ ಅತಿವೃಷ್ಟಿಯಿಂದ ಅಪಾರ ಹಾನಿ ಸಂಭವಿಸಿದ್ದು, ಪರಿಹಾರ ನೀಡಲು ಬಿಟ್ಟು ಹೋಗಿದ್ದ ೭೬೦೦ ಮನೆಗಳಿಗೆ ಪರಿಹಾರ ಒದಗಿಸಲು ಹೊಸದಾಗಿ ಅನುಮೋದನೆ ನೀಡಲಾಗಿದ್ದು, ಅನುದಾನವನ್ನು ಸಹ ಬಿಡುಗಡೆ ಮಾಡಲಾಗಿದೆ. ಪೂರ್ಣ ಹಾನಿಗೀಡಾಗಿದ್ದ ೩೬೬೯೮ ಮನೆಗಳ ಪೈಕಿ ೧೮೫೮೯ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ೭೦೯೭ ಮನೆಗಳು ಬಹುತೇಕ ಪೂರ್ಣಗೊಂಡಿದೆ ಎಂದು ಮುಖ್ಯಮಂತ್ರಿ ಅವರು ತಿಳಿಸಿದರು.


Leave a Reply