Belagavi

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


ಬೆಳಗಾವಿ ಸುವರ್ಣ ಸೌಧ ಡಿ.೨೪: ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ನಾಲ್ಕನೇ ಹಂತದ ಕೃಷ್ಣಾ ಮೇಲ್ಡಂಡೆ, ಮಹದಾಯಿ, ಎತ್ತಿನ ಹೊಳೆ ಹಾಗೂ ಮೇಕೆದಾಟು ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್‌ಲ್ಲಿಂದು ೨೦೨೧-೨೨ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಧನ ವಿನಯೋಗ ವಿಧೇಯಕದ ಮೇಲಿನ ಚರ್ಚೆಗೆ ಉತ್ತರಿಸಿ ಮಾತನಾಡಿದರು.
ಅನುಷ್ಠಾನದ ವಿಳಂಬದಿAದಾಗಿ ನೀರಾವರಿ ಯೋಜನೆಗಳ ವೆಚ್ಚ ಅಧಿಕವಾಗುತ್ತಿದೆ. ಯೋಜನೆಗಳ ಭೂ ಸ್ವಾಧೀನ ಪರಿಹಾರ ಹಾಗೂ ಪುರ್ನವಸತಿವಾಗಿ ಹಣ ಬಿಡುಗಡೆ ಮಾಡಲಾಗಿದೆ. ಮಹಾದಾಯಿ ಯೋಜನೆ ಅನುಷ್ಠಾನಕ್ಕೆ ಇರುವ ಕಾನೂನು ತೊಡಕುಗಳನ್ನು ನಿವಾರಿಸಲಾಗುತ್ತಿದೆ. ಎತ್ತಿನ ಹೊಳೆ ಯೋಜನೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಮೇಕೆದಾಟು ಯೋಜನೆ ಬಗ್ಗೆ ಬದ್ದತೆಯಿದೆ. ಕಾವೇರಿ ನದಿ ಪ್ರಾಧಿಕಾರದಿಂದ ಅನುಮತಿ ಪಡೆದು ಅಣೆಕಟ್ಟು ನಿರ್ಮಿಸಲಾಗುವುದು. ಈಗಾಗಲೇ ಪರಿಸರ ಇಲಾಖೆ ಅನುಮತಿ ಪತ್ರ ಪಡೆಯಲಾಗಿದೆ ಎಂದರು.
ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ೫ ವರ್ಷದವರೆಗೆ ಜಿ.ಎಸ್.ಟಿ. ಪರಿಹಾರ ನೀಡಲು ನಿರ್ಧರಿಸಿದಾಗ ಸಂಸತ್ತಿನಲ್ಲಿ ಎಲ್ಲಾ ರಾಜ್ಯಗಳು ಒಪ್ಪಿಕೊಂಡಿವೆ. ಕೇಂದ್ರ ಸರ್ಕಾರ ೨೦೧೭ ರಿಂದ ೨೦೨೧ ನವೆಂಬರ್ ವರೆಗೆ ಒಟ್ಟು ೫೦೭೩೪ ಕೋಟಿ ರೂಪಾಯಿಗಳ ಜಿ.ಎಸ್.ಟಿ ತೆರಿಗೆ ಸಂಗ್ರಹದ ಪಾಲನ್ನು ರಾಜ್ಯಕ್ಕೆ ನೀಡಿದೆ. ಕೋವಿಡ್ ಸಂದರ್ಭದಲ್ಲಿಯೂ ಕಂದಾಯ ಸಂಗ್ರಹಣೆಗೆ ಒತ್ತು ನೀಡಲಾಗಿದೆ. ಕಂದಾಯ, ತೆರಿಗೆ ಸಂಗ್ರಹಿಸುವ ಇಲಾಖೆಗಳ ಉನ್ನತ ಮಟ್ಟದ ಸಭೆ ನಡೆಸಿ ಸೂಕ್ಷö್ಮ ಮಟ್ಟದ ಪರಿಶೀಲನೆ ಮಾಡಿ ಹೊಸ ತೆರಿಗೆಗಳ ನೋಂದಣಿಗೆ ಸೂಚಿಸಲಾಗಿದೆ. ಜಿ.ಎಸ್.ಟಿ.ಯಿಂದ ಹೊರಗುಳಿದಿದ್ದ ಅಡಿಕೆಯ ಮೇಲೆ ಜಿ.ಎಸ್.ಟಿ. ಹಾಕಲು ಸೂಚಿಸಿದ ಒಂದು ವಾರದ ಅವಧಿಯೊಳಗೆ ೮ ಕೋಟಿ ರೂ. ಅಧಿಕ ತೆರಿಗೆ ಸಂಗ್ರಹವಾಗಿದೆ. ಬರುವ ಮೂರು ತಿಂಗಳಲ್ಲಿ ಪರಿಷ್ಕೃತ ಗುರಿ ನಿಗದಿಪಡಿಸಿ ಕಂದಾಯ ಸಂಗ್ರಹಣೆಗೆ ಒತ್ತು ನೀಡಲಾಗುವುದು. ಸರ್ಕಾರ ವಿವಿಧ ಇಲಾಖೆಗಳಲ್ಲಿ ಶೇ.೫ ರಷ್ಟು ಅನುತ್ಪಾದಕ ವೆಚ್ಚಗಳಿಗೆ ಕಡಿವಾಣ ಹಾಕಲಾಗಿದೆ.
ಮುಂದಿನ ಅಯವ್ಯಯದಲ್ಲಿ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಹೆಚ್ಚಿನ ಅನುದಾನ ನೀಡಲಾಗುವುದು. ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಬಾಕಿ ವಿದ್ಯಾರ್ಥಿವೇತನ ಹಾಗೂ ಇತರೆ ಯೋಜನೆಗಳ ಹಣ ಬಿಡುಗಡೆ ಮಾಡಲಾಗುವುದು. ಅವಧಿ ಪೂರ್ಣಗೊಳ್ಳುತ್ತಿರುವ ವಿಧಾನ ಪರಿಷತ್ ಸದಸ್ಯರು ರೂಪಿಸಿದ ಕ್ರಿಯಾಯೋಜನೆಗಳಿಗೆ ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗುವುದು. ಹಣಕಾಸು ಇಲಾಖೆ ೧೫೦೦೦ ಶಿಕ್ಷಕರ ನೇಮಕಾತಿ ಅನುಮತಿ ನೀಡಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ ೧೦೦೦೦ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ವಿಧಾನ ಪರಿಷತ್‌ನಲ್ಲಿ ೨೦೨೧-೨೨ನೇ ಸಾಲಿನ ಪೂರಕ ಅಂದಾಜುಗಳ ಎರಡನೇ ಕಂತಿನ ಬೇಡಿಕೆಗಳ ಧನ ವಿನಿಯೋಗ ವಿಧೇಯಕಕ್ಕೆ ಅಂಗೀಕಾರ ನೀಡಲಾಯಿತು.


Leave a Reply