Koppal

ಕುಷ್ಟಗಿ -ಗುಮಗೇರಾ ಸೋಲಾರ್ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಶಾಂತಿಯುತ ಪ್ರತಿಭಟನೆ


 

ಕುಷ್ಟಗಿ:  ಗುಮಗೇರಾ ಸೀಮಾ ವ್ಯಾಪ್ತಿಯ ಅಂದಾಜು 300 ಎಕರೆ ವ್ಯಾಪ್ತಿಯ ಸೌರ ವಿದ್ಯುತ್ ಉತ್ಪಾದನಾ ಘಟಕದಲ್ಲಿ, ಕಳೆದ ನಾಲ್ಕು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರ ಗೋಳಿನ ಕಥೆ ಇದು…

ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು 2016-17 ನೇ ಸಾಲಿನಲ್ಲಿ ಕುಷ್ಟಗಿ, ಗುಮಗೇರಾ ಹಾಗೂ ಕಂದಕೂರ ಗ್ರಾಮಗಳ ರೈತರ ಕೃಷಿ ಜಮೀನು ನೀಡಿದ್ದಾರೆ.

ಒಂದೆಡೆ ಸಾಗುವಳಿ ಜಮೀನು ನೀಡಿದ ರೈತರಿಗೂ ಸಮರ್ಪಕ ವಾರ್ಷಿಕ ಗುತ್ತಿಗೆ ಬೆಲೆ ನೀಡದೇ , ಮತ್ತೊಂದೆಡೆ 12 ಗಂಟೆ ಶ್ರಮವಹಿಸಿ ದುಡಿಯುವ ಕಾರ್ಮಿಕರಿಗೂ ಕನಿಷ್ಠ ವೇತನ ಸೇರಿದಂತೆ ಕಾರ್ಮಿಕ ಕಾಯ್ದೆಗಳನ್ವಯ ಸೂಕ್ತ ಸೌಲಭ್ಯಗಳ ಪೂರೈಸದೆ, ರೇಸ್ ಪವರ್ ಇನ್ಫ್ರಾ ಪ್ರೈ. ಲಿ. ಹಾಗೂ ಪಯನಿಯರ್ ಸೆಕ್ಯೂರಿಟಿ ಸಲ್ಯೂಷನ್ ಎಂಬ ಉಭಯ ಕಂಪನಿಗಳು ರೈತ ಮತ್ತು ಕಾರ್ಮಿಕ ವರ್ಗದ ಜನತೆಗೆ ಅನ್ಯಾಯವೆಸಗುತ್ತಿವೆ.

ಸೆಕ್ಯೂರಿಟಿ ಗಾರ್ಡ್ ತಾಂತ್ರಿಕ ಹಾಗೂ ಕಾರ್ಮಿಕ ವರ್ಗದ ಒಟ್ಟು ಜನ ಕಳೆದ ನಾಲ್ಕು ವರ್ಷಗಳಿಂದಲೂ ತಮ್ಮನ್ನು ವಂಚಿಸುತ್ತಿರುವ ಕಂಪನಿಗಳ ವಿರುದ್ಧ ಹೋರಾಡುತ್ತಲೇ ಇದ್ದಾರೆ. ಆದರೆ, ಕಂಪನಿಗಳು ಮಾತ್ರ ಕಾರ್ಮಿಕರ ಮೂಗಿಗೆ ತುಪ್ಪ ಸವರುತ್ತಾ, ಭರವಸೆಗಳ ಬಿಸಿಲ್ಗುದುರೆ ತೋರಿಸುತ್ತಾ ದುಡಿಸಿಕೊಳ್ಳುತ್ತಿವೆ. ಎರಡೂ ಕಂಪನಿಗಳ ಕಣ್ಣಾಮುಚ್ಚಾಲೆ ಆಟಕ್ಕೆ ಪರೋಕ್ಷ ಬೆಂಬಲ ನೀಡುವ ಕಾರ್ಮಿಕ ಇಲಾಖೆ ಅಧಿಕಾರಿಗಳು ಹೊರ ರಾಜ್ಯಗಳ ಕಂಪನಿ ಆಟಕ್ಕೆ ತಾಳಹಾಕುತ್ತಿರುವುದು ವಿಪರ್ಯಾಸ…

ಪದೇಪದೇ ಕಂಪನಿಗಳು ಹೇಳುವ ಹುಸಿ ಭರವಸೆಗಳಿಂದ ಬೇಸತ್ತು, ಅತ್ತ ತಮ್ಮ ಕುಟುಂಬಗಳನ್ನೂ ನಿರ್ವಹಣೆ ಮಾಡಲಾಗದೆ, ಇತ್ತ ಕಂಪನಿ ಮತ್ತು ಕಾರ್ಮಿಕ ಇಲಾಖೆಯವರು ಪದೇಪದೇ ಮಾಡುತ್ತಿರುವ ಅನ್ಯಾಯ ಹಾಗೂ ದ್ರೋಹದ ವಿರುದ್ಧ ಬೇಸತ್ತು, ದಿನಾಂಕ 27-12-2021ರ ಸೋಮವಾರದಿಂದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದಾರೆ.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ.


Leave a Reply