Koppal

ಡಾ. ಪಂ. ನರಸಿಂಹಲು ವಡವಾಟಿ ಅಭಿನಂದನಾ ಗ್ರಂಥ ಬಿಡುಗಡೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಗೀತದ ಛಾಪು ಮೂಡಿಸಿದ ಡಾ. ವಡವಾಟಿ


ರಾಯಚೂರು:ಡಿ,೩೦, ಡಾ. ಪಂ. ನರಸಿಂಹಲು ವಡವಾಟಿಯವರಂತಹ ಅಂತರ ರಾಷ್ಟ್ರೀಯ ಕಲಾವಿದರನ್ನು ಹೊಂದಿದ ರಾಯಚೂರು, ಭಾರತ, ವಿಶ್ವಮಾನ್ಯವಾಗಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿಗಳಾದ ಪೆÇ್ರ. ಹರೀಶ್ ರಾಮಸ್ವಾಮಿಯವರು ಹೆಮ್ಮೆಯನ್ನು ವ್ಯಕ್ತಪಡಿಸಿದರು.

ಉದಯನಗರದ ಸ್ವರಸಂಗಮ ಸಂಗೀತ ವಿದ್ಯಾಲಯದಲ್ಲಿ ಡಾ. ಪಂ. ನರಸಿಂಹಲು ವಡವಾಟಿ ಅಭಿನಂದನಾ ಸಮಿತಿಯವರು ಏರ್ಪಡಿಸಿದ್ದ ಡಾ. ಪಂ. ನರಸಿಂಹಲು ವಡವಾಟಿಯವರ “ನಾದ ಸನ್ನಿಧಿ” ಅಭಿನಂದನಾ ಗ್ರಂಥ ಲೋಕಾರ್ಪಣೆ ಹಾಗೂ ಪಂ. ಸಿದ್ಧರಾಮ ಜಂಬಲದಿನ್ನಿ ಪುಣ್ಯಸ್ಮರಣೆಯ ಅಂಗವಾಗಿ ಏರ್ಪಡಿಸಿದ್ದ 33ನೇ ವರ್ಷದ ಸಂಗೀತ ಸಮ್ಮೇಳನದಲ್ಲಿ ಗ್ರಂಥ ಲೋಕಾರ್ಪಣೆ ಮಾಡಿ ಮಾತನಾಡಿದರು.

ವಡವಾಟಿಯವರ ಸ್ವರ ಸಂಗಮ ವಿದ್ಯಾ ಸಂಸ್ಥೆ ವಿಶ್ವದಲ್ಲಿಯೇ ಹೆಸರು ಮಾಡಿದೆ. ಗಾಯನದ ಜೊತೆಗೆ ಕ್ಲಾರಿಯೋನೆಟ್‍ನಲ್ಲಿ ವಿಶ್ವವಿಖ್ಯಾತರಾಗಿರುವಂತಹ ಮಹನೀಯರ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ ಎಂದು ಸರ್ಕಾರದ ಮಾಜಿ ಆಡ್ವೊಕೇಟ್ ಜನರಲ್ ಪೆÇ್ರ. ರವಿವರ್ಮ ಕುಮಾರ್ ವಡವಾಟಿಯವರ ಕುರಿತ ಸಾಕ್ಷ್ಯ ಚಿತ್ರ ‘ಸಂಗೀತ ಸಂತ’ ಬಿಡುಗಡೆ ಮಾಡಿ ಮಾತನಾಡಿದರು. ಅವರ ಬಳಿ ಕೊಳಲು ಕಲಿಯಬೇಕೆಂಬ ಬಯಕೆ ಇತ್ತು, ಅದು ಈಡೇರದಿದ್ದರೂ, ಅವರ ಜೊತೆ ಭಾವಚಿತ್ರ ತೆಗೆಸಿಕೊಳ್ಳುವುದೇ ಒಂದು ಹೆಮ್ಮೆ ಎನಿಸುತ್ತದೆ ಎಂದರು.

ಖ್ಯಾತ ಹಿಂದೂಸ್ಥಾನಿ ಗಾಯಕರಾದ ಡಾ. ನಾಗರಾಜ್ ಹವಲ್ದಾರ್ ಅಭಿನಂದನಾ ನುಡಿಗಳನ್ನಾಡುತ್ತಾ ಕ್ಲಾರಿಯೋನೆಟ್‍ನಲ್ಲಿ ಶಾಸ್ತ್ರೀಯ ಸಂಗೀತ ನುಡಿಸುವುದು ಅಷ್ಟು ಸುಲಭ ಸಾಧ್ಯವಲ್ಲ. ಆದರೂ ಶಾಸ್ತ್ರೀಯ ಸಂಗೀತವನ್ನು ಅದ್ಭುತವಾಗಿ ನುಡಿಸಬಹುದು ಎಂದು ವಡವಾಟಿಯವರು ಗಾಯಕೀಯ ಶೈಲಿಯಲ್ಲಿ ಸಾಧಿಸಿ ತೋರಿಸಿದ್ದಾರೆ. ಹಿಂದೂಸ್ಥಾನಿ ಸಂಗೀತ ಪರಂಪರೆಯಲ್ಲಿ ಖ್ಯಾತರಾಗಿರುವ ನರಸಿಂಹಲು ವಡವಾಟಿಯವರ ಹೆಸರು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಂಗೀತ ಪರಂಪರೆಯ ಛಾಪು ಮೂಡಿಸಿರುವುದು, ನಾನು ವಿದೇಶಗಳಿಗೆ ಭೇಟಿ ನೀಡಿದಾಗ ಕಂಡು ಬಂತು ಎಂದು ಮನದುಂಬಿ ಅವರ ಕೊಡುಗೆಯನ್ನು ಸ್ಮರಿಸಿದರು.

ಶಾಸಕರಾದ ಡಾ. ಶಿವರಾಜ್ ಪಾಟೀಲ್ ಮಾತನಾಡಿ ಭಾರತದ ಹೆಸರನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಡಾ. ವಡವಾಟಿಯವರು ನಮ್ಮ ರಾಯಚೂರಿನವರು ಎಂಬುದು ನಮಗೆ ಹೆಮ್ಮೆಯ ಸಂಗತಿ ಎಂದು ಕೊಂಡಾಡಿದರು. ಇದೂವರೆಗೂ ತಮಗಾಗಿ ಯಾವುದೇ ಬೇಡಿಕೆ ಇಟ್ಟವರಲ್ಲ. ಆದರೆ ಅವರ ಗುರುಗಳಾದ ಸಿದ್ಧರಾಮ ಜಂಬಲದಿನ್ನಿ ಹೆಸರಿನ ಟ್ರಸ್ಟ್ ಆರಂಭಿಸಲು ಮನವಿ ಮಾಡಿದ್ದಾರೆ ಅದನ್ನು ಸರ್ಕಾರದ ಮೇಲೆ ಒತ್ತಡ ತಂದು ಈಡೇರಿಸುವುದಾಗಿ ತಿಳಿಸಿದರು.

ಸೋಮವಾರಪೇಟೆ ಮಠದ ಅಭಿನವ ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು, ಬೂದಿಬಸವೇಶ್ವರ ಮಠದ ಬೂದಿಬಸವೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಡವಾಟಿ ದಂಪತಿಗಳನ್ನು ಸನ್ಮಾನಿಸಲಾಯಿತು. ವಡವಾಟಿ ಶಾರದಾ ಭರತ್ ಪ್ರಾರ್ಥನೆ ಸಲ್ಲಿಸಿದರು. ಅಭಿನಂದನಾ ಗ್ರಂಥ ಸಂಪಾದಕ ಕೆ.ಎನ್. ರೆಡ್ಡಿ ಸ್ವಾಗತಿಸಿದರೆ, ಎರೆಯಪ್ಪ ಬೆಳಗುರ್ಕಿ ವಂದಿಸಿದರು, ಬಸವರಾಜ ಭಗವತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆ. ಯೋಗ ರವೀಶ್ ಭಾರತ್ ಕಾರ್ಯಕ್ರಮ ನಿರೂಪಿಸಿದರು.

ವಿಶ್ವನಾಥ ಸಾಹುಕಾರ
ರಾಯಚೂರು


Leave a Reply