Koppal

ಕೆರೆಹಳ್ಳಿ ಬೆಟ್ಟದ ತಿರುಗಲ್ ತಿಮ್ಮಪ್ಪ ದೇವಸ್ಥಾನಕ್ಕೆ ತೆರಳಲು ರಸ್ತೆ ನಿರ್ಮಿಸಲು ಮನವಿ


ಕೊಪ್ಪಳ,ಡಿ.30-ಜಿಲ್ಲೆಯ ಐತಿಹಾಸಿಕ ಪ್ರಸಿದ್ಧಿ ಪಡೆದಿರುವ ಶ್ರೀ ತಿರುಗಲ್ ತಿಮ್ಮಪ್ಪ ಬೆಟ್ಟಕ್ಕೆ ತೆರಳಲು ರಸ್ತೆ ನಿರ್ಮಿಸಬೇಕೆಂದು ಶ್ರೀ ತಿರುಗಲ್ ತಿಮ್ಮಪ್ಪ, ಶ್ರೀ ಲಕ್ಷ್ಮೀದೇವಿ, ಶ್ರೀ ತೇರಿನ ಹನುಮಪ್ಪ ದೇವಸ್ಥಾನ ಟ್ರಸ್ಟ್ ಕಮಿಟಿ ಜನಪ್ರತಿನಿಧಿಗಳಲ್ಲಿ ಮನವಿ ಮಾಡಿದೆ.
ಈ ಕುರಿತು ಟ್ರಸ್ಟ್ ಅಧ್ಯಕ್ಷ ವೀರಣ್ಣ ಕೋಮಲಾಪುರ, ಉಪಾಧ್ಯಕ್ಷ ಸಿದ್ಧರಾಮಪ್ಪ ಭಟ್ಟರ್ ಮತ್ತು ಕಾರ್ಯದರ್ಶಿ ವಸಂತ್ ಶಿಳ್ಳೆಕ್ಯಾತರ್ ಇವರು ಕೊಪ್ಪಳ ಕ್ಷೇತ್ರದ ಸಾಸಕ ಕೆ.ರಾಘವೇಂದ್ರ ಹಿಟ್ನಾಳ್, ಸಂಸದ ಸಂಗಣ್ಣ ಕರಡಿ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಪತ್ರ ಬರೆದಿದ್ದು, ಪ್ರವಾಸಿಗರು ಮತ್ತು ಭಕ್ತರ ಅನುಕೂಲಕ್ಕಾಗಿ ತಿಮ್ಮಪ್ಪನ ಬೆಟ್ಟಕ್ಕೆ ಗುಣಮಟ್ಟದ ರಸ್ತೆ ನಿರ್ಮಿಸಬೇಕೆಂದು ಮನವಿ ಮಾಡಿದ್ದಾರೆ.
ಕೊಪ್ಪಳ ಜಿಲ್ಲೆಯ ಐತಿಹಾಸಿಕ ಮತ್ತು ಪ್ರವಾಸೋದ್ಯಮದಲ್ಲಿ ಇದೂ ಒಂದು ಪ್ರಮುಖ ತಾಣವಾಗಿದ್ದು ವಿಜಯನಗರ ಆಳರಸರ ಕಾಲದಲ್ಲಿ ನಿರ್ಮಾಣವಾಗಿದೆ. ಕೆರೆಹಳ್ಳಿ, ಬೂದುಗುಂಪಾ, ಶಹಪುರ, ಗುಡದಳ್ಳಿ, ಇಂದರಗಿ, ಕೂಕನಪಳ್ಳಿ ಸೇರಿದಂತೆ ನಾನಾ ಗ್ರಾಮಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಪ್ರತಿವರ್ಷ ಶ್ರಾವಣ ಮಾಸದ ಕೊನೆ ಶನಿವಾರ ತೇರಿನ ಹನುಮಪ್ಪನ ಜಾತ್ರೆ, ಪಲ್ಲಕ್ಕಿ ಉತ್ಸವ, ಬಂಡೆ ಪ್ರಸಾದ ಸೇವನೆಯ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಸಾವಿರಾರು ಭಕ್ತರು ಆಗಮಿಸುತ್ತಾರೆ. ಅಲ್ಲದೆ ಪ್ರತಿ ಶನಿವಾರವೂ ಇಲ್ಲಿಗೆ ಭಕ್ತರು ಬೆಟ್ಟಕ್ಕೆ ಭೇಟಿ ನೀಡುತ್ತಿದ್ದಾರೆ. ಭಕ್ತರು ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಇಲ್ಲಿ ರಸ್ತೆ ನಿರ್ಮಾಣ ತುರ್ತಾಗಿ ಆಗಬೇಕಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಟ್ರಸ್ಟ್ ಅನ್ನು ಇತ್ತೀಚೆಗೆ ರಚಿಸಲಾಗಿದ್ದು ವಿವಿಧ ರೀತಿಯ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಈ ದೇವಾಲಯಗಳಿಗೆ ತೆರಳಲು ಸಮರ್ಪಕ ದಾರಿ ಇಲ್ಲ. ಭಕ್ತರು ಕಲ್ಲುಬಂಡೆಗಳ ಮೇಲೆ ಸಾಗಿ ದೇವಾಲಯ ಸಂಕೀರ್ಣ ತಲುಪಬೇಕಾಗುತ್ತದೆ. ಜನಪ್ರತಿನಿಧಿಗಳ ಸ್ಥಳೀಯ ಅಭಿವೃದ್ಧಿ ಯೋಜನೆಯಡಿ ರಸ್ತೆ ನಿರ್ಮಿಸಿದರೆ ನಾಡಿನ ಮೂಲೆ ಮೂಲೆಗಳಿಂದ ಬೆಟ್ಟಕ್ಕೆ ಬರುವವರ ಸಂಖ್ಯೆ ಇನ್ನಷ್ಟು ದ್ವಿಗುಣಗೊಳ್ಳುತ್ತದೆ. ಸ್ಥಳೀಯರಿಗೆ ಉದ್ಯೋಗಾವಕಾಶ ಮತ್ತು ಜೀವನ ನಿರ್ವಹಣೆಗೆ ಅನುಕೂಲವಾಗುತ್ತದೆ. ಜನಪ್ರತಿನಿಧಿಗಳು ಅಪರೂಪದ ಈ ದೇವಾಲಯದ ಅಭಿವೃದ್ಧಿಯೊಂದಿಗೆ ರಸ್ತೆ ನಿರ್ಮಿಸಿಕೊಡುವಂತೆಯೂ ಅವರು ಮನವಿ ಮಾಡಿದ್ದಾರೆ.


Leave a Reply