Belagavi

ಶ್ರೀಮತಿ ಮಂಗಲಾ ಮೆಟಗುಡ್ಡರವರು ಸರಕಾರಿ ಶಾಲೆಗಳಿಗೆ ಭೇಟಿ


ಬೆಳಗಾವಿ:೩೧-ಇದೇ ಗುರುವಾರ ದಿ.೩೦/೧೨/೨೦೨೧ ರಂದು ಬೆಳಗಾವಿ ಜಿಲ್ಲಾ ಕಸಾಪ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀ ಮೆಟಗುಡ್ಡ ಅವರು ಬೆಳಗಾವಿಯ ರುಕ್ಮೀಣಿನಗರ ಮತ್ತು ರಾಮತೀರ್ಥನಗರದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಕುಂದುಕೊರತೆಗಳನ್ನು ಆಲಿಸಿದರು. ಸರಕಾರಿ ಅನುದಾನದಲ್ಲಿ ಕೈಗೊಂಡ ಕಾರ್ಯಗಳು ಮತ್ತು ಶಾಲೆಗೆ ತುರ್ತಾಗಿ ಬೇಕಾದ ಸವಲತ್ತುಗಳ ಬಗ್ಗೆ ವಿಚಾರಿಸಿದರು. ಬೆಳಗಾವಿ ಗಡಿ ಜಿಲ್ಲೆಯಾಗಿರುವುದರಿಂದ, ಬೆಳಗಾವಿ ನಗರದಲ್ಲಿ ವಿಶೇಷವಾಗಿ ಕನ್ನಡದ ಬಗ್ಗೆ ಒತ್ತು ನೀಡಬೇಕು. ಮಾತೃ ಭಾಷೆಯಲ್ಲಿ ಮಗು ಬೌದ್ಧಿಕವಾಗಿ ಬೆಳವಣಿಗೆಯಾದರೆ ಮಾತ್ರ ಮಗುವಿನ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗುವುದು ಎಂದರು. ವಿಶೇಷವಾಗಿ ಕನ್ನಡ ಶಾಲೆಗಳಿಗೆ, ಕನ್ನಡ ಅಭಿವೃದ್ದಿ ಪ್ರಾಧಿಕಾರ, ಗಡಿ ಪ್ರಾಧಿಕರ ಹಾಗೂ ಕಸಾಪ ವತಿಯಿಂದ ಕನ್ನಡದ ಅಭಿವೃದ್ಧಿಗಾಗಿ ಬರುವ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಎರಡು ಶಾಲೆಗಳ ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು ಶಾಲಾ ಶಿಕ್ಷಕರು ಸೇರಿದಂತೆ ಕನ್ನಡ ಹೋರಾಟಗಾರ್ತಿ ಕಸ್ತೂರಿ ಭಾವಿ, ಕಸಾಪ ಕಾರ್ಯದರ್ಶಿ ಮಹಾಂತೇಶ ಮೆಣಸಿನಕಾಯಿ ಹಾಗೂ ಶಾಲೆಯ ಮಕ್ಕಳ ಕೆಲವು ಪಾಲಕರು ಹಾಜರಿದ್ದರು.


Leave a Reply