Belagavi

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಸಭೆ: ಪ್ರಗತಿ ಪರಿಶೀಲನೆ ಜಾತಿ ಪ್ರಮಾಣ ಪತ್ರ: ಸರಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ


ಬೆಳಗಾವಿ: ಯಾವುದೇ ಜಾತಿಪ್ರಮಾಣ ಪತ್ರಗಳನ್ನು ನೀಡುವಾಗ ಸ್ಥಾನಿಕ ಚೌಕಾಶಿ ಮಾಡಬೇಕು ಹಾಗೂ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ಜ.7) ನಡೆದ ಹಿಂದುಳಿದ ವರ್ಗಗಗಳ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಿಂಧುತ್ವ ಪ್ರಮಾಣಪತ್ರ ನೀಡುವಾಗ ಸಾಮಾನ್ಯವಾಗಿ ತಂದೆಯ ಜಾತಿಯನ್ನು ಪರಿಗಣಿಸಲಾಗುತ್ತದೆ. ಯಾವುದೇ ಜಾತಿಪ್ರಮಾಣ ಪತ್ರಗಳನ್ನು ನೀಡುವಾಗ ಸ್ಥಾನಿಕ ಚೌಕಾಶಿ ನಡೆಸಿ ಆಯಾ ಜಾತಿಯ ಗುಣಲಕ್ಷಣಗಳನ್ನು ಖಚಿತಪಡಿಸಿಕೊಳ್ಳಬೇಕು ಹಾಗೂ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಕ್ಕಳಿಗೆ ಹಾಸಿಗೆ, ಮಂಚ ವ್ಯವಸ್ಥೆ ಕಲ್ಪಿಸಲು ಸೂಚನೆ:
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಡೆಸಲಾಗುತ್ತಿರುವ ವಸತಿ ನಿಲಯಗಳಲ್ಲಿ ಎಲ್ಲ ಮಕ್ಕಳಿಗೆ ಕಡ್ಡಾಯವಾಗಿ ಹಾಸಿಗೆ, ಮಂಚಗಳ ವ್ಯವಸ್ಥೆಯನ್ನು ಸಮರ್ಪಕವಾಗಿ ಕಲ್ಪಿಸಬೇಕು. ಶಾಸಕರ ಅನುದಾನದಲ್ಲಿ ವಸತಿ ನಿಲಯಗಳಿಗೆ ಹಾಸಿಗೆ, ಮಂಚ ಮತ್ತಿತರ ಸೌಕರ್ಯಗಳನ್ನು ಕಲ್ಪಿಸಲು ಪ್ರಯತ್ನಿಸಬೇಕು ಎಂದು ಕೆ.ಜಯಪ್ರಕಾಶ್ ಹೆಗ್ಡೆ ಅವರು ಸಲಹೆ ನೀಡಿದರು. ಹೆಚ್ಚುವರಿ ಪ್ರವೇಶ ಕಲ್ಪಿಸಿರುವ ಮಕ್ಕಳಿಗೆ ಯಾವುದೇ ರೀತಿಯ ಅನಾನುಕೂಲ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.

ಕೆಲವು ವಸತಿನಿಲಯಗಳಲ್ಲಿ ಖಾಲಿ ಉಳಿಯುವ ಹಿಂದುಳಿದ ವರ್ಗಗಳ ವಿವಿಧ ಕೆಟಗರಿಯ ಸೀಟುಗಳನ್ನು ಇತರೆ ಅರ್ಹ ಕೆಟಗರಿಯ ಮಕ್ಕಳಿಗೆ ನಿಯಮಾವಳಿ ಪ್ರಕಾರ ಹಂಚಿಕೆ ಮಾಡಬೇಕು ಎಂದು ಹೆಗ್ಡೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಹಿಂದುಳಿದ ವರ್ಗಗಳ ವಸತಿನಿಲಯಗಳಲ್ಲಿ ಪ್ರವೇಶ ದೊರಕದಿರುವ ಮಕ್ಕಳಿಗೆ ಆರ್ಥಿಕ ನೆರವು ನೀಡುವ ಯೋಜನೆಯನ್ನು ಮುಂದುವರಿಸುವುದರಿAದ ಅನೇಕ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಭಿಪ್ರಾಯಪಟ್ಟರು.

ಜಾತಿಗಳ ಗುಣಲಕ್ಷಣಗಳ ಸಮಗ್ರ ಪಟ್ಟಿ ಒದಗಿಸಲು ಮನವಿ:
ಬೆಳಗಾವಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ಕೇಂದ್ರ ಹಾಗೂ ರಾಜ್ಯಗಳ ಪಟ್ಟಿಯಲ್ಲಿ ಕೆಲವು ಕೆಟಗರಿಗಳ ವರ್ಗೀಕರಣದಲ್ಲಿ ವ್ಯತ್ಯಾಸ ಕಂಡುಬರುವುದರಿAದ ಉದ್ಯೋಗ ಮತ್ತು ಶಿಕ್ಷಣ ಮೀಸಲಾತಿ ಸೌಲಭ್ಯಗಳಲ್ಲಿ ಕೂಡ ವ್ಯತ್ಯಾಸ ಕಂಡುಬರುತ್ತಿದೆ ಎಂದು ತಿಳಿಸಿದರು.

ಪ್ರತಿ ಜಾತಿಗಳ ಗುಣಲಕ್ಷಣಗಳ ಸಮಗ್ರ ಪಟ್ಟಿಯನ್ನು ಆಯೋಗದಿಂದ ಸಿದ್ಧಪಡಿಸಿದರೆ ಜಾತಿಪ್ರಮಾಣಪತ್ರಗಳನ್ನು ನೀಡುವಾಗ ಗೊಂದಲ ಉಂಟಾದರೆ ಇಂತಹ ಪಟ್ಟಿ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕೋವಿಡ್ ನಿಂದ ತಂದೆ-ತಾಯಿ ಕಳೆದುಕೊಂಡ ಮಕ್ಕಳಿಗೆ ಬಾಲಸ್ವರಾಜ್ ಯೋಜನೆಯಡಿ ಪ್ರತಿ ಮಾಹೆ 3 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ ವಿವರಿಸಿದರು.

ಇದಲ್ಲದೆ ಏಕಪೋಷಕರನ್ನು ಹೊಂದಿರುವ ಮಕ್ಕಳ ಪಟ್ಟಿಯನ್ನು ಕೂಡ ಸರಕಾರದ ಮಾರ್ಗದರ್ಶನದ ಪ್ರಕಾರ ಸಿದ್ಧಪಡಿಸಲಾಗುತ್ತಿದೆ ಎಂದರು. ಸಭೆಯಲ್ಲಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಗೌರಿಶಂಕರ ಅವರು, ಬುಡಾ ವ್ಯಾಪ್ತಿಯಲ್ಲಿ ವಸತಿನಿಲಯಗಳ ನಿರ್ಮಾಣಕ್ಕೆ ಮೂರು ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಆದರೆ ಲೀಸ್ ಹಣ ಪಾವತಿಸಲು ಅನುದಾನ ಲಭ್ಯವಿಲ್ಲದಿರುವುದರಿಂದ ನಿವೇಶನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ತಿಳಿಸಿದರು.

ಗಂಗಾಕಲ್ಯಾಣ ಯೋಜನೆ ಅನುಷ್ಠಾನ, ಸಮುದಾಯ ಭವನಗಳ ನಿರ್ಮಾಣ, ವಸತಿನಿಲಯಗಳ ನಿರ್ವಹಣೆ ಕುರಿತು ಮಾಹಿತಿಯನ್ನು ನೀಡಿದರು. ಆಯೋಗದ ಸದಸ್ಯರಾದ ಕಲ್ಯಾಣಕುಮಾರ್, ರಾಜಶೇಖರ್, ಅರುಣಕುಮಾರ್, ಕೆ.ಟಿ.ಸುವರ್ಣ, ಬೈಲಹೊಂಗಲ ಉಪ ವಿಭಾಗಾಧಿಕಾರಿ ಶಶಿಧರ್ ಬಗಲಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಈಶ್ವರ ಉಳ್ಳಾಗಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಉಮಾ ಸಾಲಿಗೌಡರ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


Leave a Reply