Belagavi

ಯಲ್ಲಮ್ಮನ ಹುಂಡಿಯಲ್ಲಿ 1.18 ಕೋಟಿ ರೂ. ಸಂಗ್ರಹ


ಸವದತ್ತಿ : ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಬುಧವಾರ‌ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಜರುಗಿತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರು, ದೇವಸ್ಥಾನ ಹಾಗೂ ಸವದತ್ತಿ ಪೊಲೀಸ್‌ ಠಾಣೆ ಅಧಿಕಾರಿಗಳ ಸಮ್ಮುಖದಲ್ಲಿ ಹಣ ಎಣಿಕೆ ನಡೆಸಲಾಯಿತು.

ಪ್ರಸಿದ್ಧ ಶಕ್ತಿ ಪೀಠಗಳಲ್ಲೊಂದಾದ ಶ್ರೀ ರೇಣುಕಾ ಯಲ್ಲಮ್ಮನ ಸಾನ್ನಿಧ್ಯಕ್ಕೆ ದೇಶದ ನಾನಾ ಕಡೆಗಳಿಂದ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥ ಈಡೇರಿದ ಹಿನ್ನೆಲೆ ದೇವಿಗೆ ಕಾಣಿಕೆ ರೂಪದಲ್ಲಿ ಚಿನ್ನ, ಬೆಳ್ಳಿ ಆಭರಣ ನೀಡುತ್ತಾರೆ ಮತ್ತು ಹುಂಡಿಯಲ್ಲಿ ಹಣ ಹಾಕಿ ಭಕ್ತಿ ಮೇರೆಯುತ್ತಾರೆ.

ಹುಂಡಿಯಲ್ಲಿ 1.18 ಕೋಟಿ ರೂ. ಸಂಗ್ರಹವಾಗಿದೆ. ಅಲ್ಲದೆ, 17.39 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು 2.20 ಲಕ್ಷ ರೂ. ಮೌಲ್ಯದ ಬೆಳ್ಳಿ ಸಂಗ್ರಹವಾಗಿದೆ.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ‘ಈ ಬಾರಿ ಹುಂಡಿ ಎಣಿಕೆ ವೇಳೆ ದಾಖಲೆ ಮೊತ್ತ ಸಂಗ್ರಹವಾಗಿದೆ. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಅಧಿಕಾರಿಗಳ ಸಹಕಾರದೊಂದಿಗೆ ಭಕ್ತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲಾಗುವುದು’ ಎಂದರು.

ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ಪುಂಡಲೀಕ ಮೇಟಿ, ಕೊಳ್ಳಪ್ಪಗೌಡ ಗಂದಿಗವಾಡ, ವೈ.ವೈ.ಕಾಳಪ್ಪನವರ, ಎಂಜಿನಿಯರ್‌ ಎ.ವಿ.ಮೂಳ್ಳೂರ, ಅಧೀಕ್ಷಕ ಬಾಳೇಶ ಅಬ್ಬಾಯಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅರವಿಂದ ಮಳಗೆ, ನಾಗರತ್ನಾ ಚೋಳಿನ, ಎಂ.ಎಸ್.ಯಲಿಗಾರ, ಎಂ.ಪಿ.ದ್ಯಾಮನಗೌಡ್ರ, ಪ್ರಕಾಶ ಪ್ರಭುನವರ, ವಿ.ಪಿ.ಸೊನ್ನದ, ಪ್ರಭು ಹಂಜಗಿ ಹಾಗೂ ಸಿಂಡಿಕೇಟ್ ಬ್ಯಾಂಕ್‌ ಸಿಬ್ಬಂದಿ ಇದ್ದರು.


Leave a Reply