Belagavi

ಹಿರಿಯ ಸಾಹಿತಿ `ಚಂದ್ರಶೇಖರ್ ಪಾಟೀಲ್’ ಇನ್ನಿಲ್ಲ


ಬೆಂಗಳೂರು : ಕನ್ನಡದ ಹಿರಿಯ ಸಾಹಿತಿ ಚಂದ್ರಶೇಖರ್ ಪಾಟೀಲ್ (83) ಇಂದು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ 6.30 ರ ಸುಮಾರಿಗೆ ನಿಧನರಾಗಿದ್ದಾರೆ.

ಕವಿ, ನಾಟಕಕಾರ, ಸಂಘಟನಕಾರ, ಪತ್ರಿಕಾ ಸಂಪಾದಕ, ಆಡಳಿತಗಾರ, ಕನ್ನಡ ಹೋರಾಟಗಾರ ಹೀಗೆ ವಿಭಿನ್ನ ನೆಲೆಗಳ ಚಂದ್ರಶೇಖರ ಪಾಟೀಲರು ಹುಟ್ಟಿದ್ದು ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಹತ್ತೀಮತ್ತೂರಿನಲ್ಲಿ 1939ರ ಜೂನ್‌ 18 ರಂದು.

ತಂದೆ ಬಸವರಾಜ ಹಿರೇಗೌಡರು, ತಾಯಿ ಮುರಿಗೆವ್ವ. ಚಂದ್ರಶೇಖರ ಪಾಟೀಲರು ಸಾಹಿತ್ಯ ಲೋಕದಲ್ಲಿ ಚಂಪಾ ಎಂಬ ಹೆಸರಿನಿಂದ ಪ್ರಖ್ಯಾತರು. ಪಾಟೀಲರ ಪ್ರಾರಂಭಿಕ ಶಿಕ್ಷಣ ಹಾವೇರಿಯಲ್ಲಿ ಮತ್ತು ಪ್ರೌಢಶಿಕ್ಷಣ ಧಾರವಾಡದಲ್ಲಿ ನೆರವೇರಿತು. ಅವರ ತಂದೆಯವರಿಗೆ ಇಂಗ್ಲಿಷ್‌ ಬಗ್ಗೆ ಅಭಿಮಾನವಿದ್ದುದರಿಂದ ಅದರಿಂದ ಪ್ರೇರಿತರಾಗಿ ಇಂಗ್ಲಿಷ್ ಎಂ.ಎ. ಪದವಿ ಗಳಿಸಿದರು. ಇದಲ್ಲದೆ ಬ್ರಿಟಿಷ್‌ ಕೌನ್ಸಿಲ್‌ ವಿದ್ಯಾರ್ಥಿವೇತನ ಪಡೆದು ಇಂಗ್ಲೆಂಡಿನ ಲೀಡ್ಸ್‌ ವಿಶ್ವವಿದ್ಯಾಲಯದಿಂದ ಭಾಷಾಶಾಸ್ತ್ರದಲ್ಲಿನ ಸ್ನಾತಕೋತ್ತರ ಪದವಿ ಮತ್ತು ಹೈದರಾಬಾದಿನ ಕೇಂದ್ರೀಯ ಇಂಗ್ಲಿಷ್‌ ಸಂಸ್ಥೆಯಿಂದ ಇಂಗ್ಲಿಷ್‌ ಅಧ್ಯಯನದ ಡಿಪ್ಲೊಮ ಪಡೆದರು. ಶಿಕ್ಷಣದ ಪ್ರತಿ ಹಂತದಲ್ಲಿಯೂ ಆಗ್ರ ಶ್ರೇಯಾಂಕ ಗಳಿಸಿದ ಕೀರ್ತಿ ಅವರದ್ದಾಗಿತ್ತು.

ಕಾವ್ಯಕೃಷಿಯಲ್ಲೇ ತೊಡಗಿಸಿಕೊಂಡಿದ್ದ ಚಂಪಾರವರು ಹಲವಾರು ಸಮಸ್ಯೆಗಳ ಮಿಡಿತಕ್ಕೆ ಒಳಗಾಗಿ ಕಾವ್ಯ ಮಾಧ್ಯಮದಿಂದ ನಾಟಕಮಾಧ್ಯಮವನ್ನೂ ಆಯ್ದುಕೊಂಡು ಹಲವಾರು ನಾಟಕಗಳನ್ನೂ ರಚಿಸಿದ್ದು ಅವುಗಳಲ್ಲಿ ಕೊಡೆಗಳು, ಅಪ್ಪ, ಕುಂಟ ಕುಂಟ ಕುರುವತ್ತಿ, ಗುರ್ತಿನವರು, ಟಿಂಗರ ಬುಡ್ಡಣ್ಣ, ಕತ್ತಲರಾತ್ರಿ, ಗೋಕರ್ಣದ ಗೌಡಸಾನಿ, ಜಗದಂಬೆಯ ಬೀದಿನಾಟಕ, ಬುರಡಿ ಬಾಬನ ವಸ್ತ್ರಾಪಹರಣ ಪವಾಡ, ನಳ ಕವಿಯ ಮಸ್ತಕಾಭಿಷೇಕ, ವಂದಿಮಾಗಧ ಮುಂತಾದವುಗಳು ಪ್ರಖ್ಯಾತವಾಗಿವೆ.

ಚಂಪಾರವರಿಗೆ ಬಂದಿರುವ ಪ್ರಶಸ್ತಿ ಗೌರವಗಳು ಹಲವಾರು. ಇವುಗಳಲ್ಲಿ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನ (1960, 74, 76), ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ದಿನಕರ ದೇಸಾಯಿ ಪ್ರತಿಷ್ಠಾನ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕೆ.ವಿ. ಶಂಕರಗೌಡ ರಂಗಭೂಮಿ ಪ್ರಶಸ್ತಿ, ಸಂದೇಶ್‌ ಮಾಧ್ಯಮ ಪ್ರಶಸ್ತಿ, ಕರುನಾಡ ಭೂಷಣ ಪ್ರಶಸ್ತಿ, ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಮತ್ತು ಪಂಪ ಪ್ರಶಸ್ತಿ ಮುಂತಾದವುಗಳು ಪ್ರಮುಖವಾಗಿವೆ.2017 ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು 2018 ಸಾಲಿನಲ್ಲಿ ಬಸವಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ


Leave a Reply