Belagavi

ಜೈಕಿಸಾನ್ ಭಾಜಿ ಮಾರ್ಕೆಟ್ ನ್ಯೂನ್ಯತೆ ಬಗ್ಗೆ ಕಠಿಣ ಕ್ರಮ ಕೈಗೊಳ್ಳುತ್ತೇವೆ: ಜಿಲ್ಲಾಧಿಕಾರಿ ಹಿರೇಮಠ


ಬೆಳಗಾವಿ: ಗಾಂಧಿ‌ ನಗರದ ಹೆದ್ದಾರಿಯ ಪಕ್ಕದಲ್ಲಿ ನಿರ್ಮಾಣವಾಗಿರುವ ಖಾಸಗಿ ಜೈ ಕಿಸಾನ್ ಭಾಜಿ ಮಾರುಕಟ್ಟೆಯಲ್ಲಿ ನ್ಯೂನತೆಯ ಇದ್ದರೆ ಈ ಬಗ್ಗೆ ತನಿಖೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ನ್ಯೂನತೆಯ ಗಂಭೀರತೆಯ ಪರಿಗಣಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ‌ ಎಂ.ಜಿ.ಹಿರೇಮಠ ಹೇಳಿದರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಖಾಸಗಿ ಮಾರುಕಟ್ಟೆ ಹಾಗೂ ಕೃಷಿ ಉತ್ಪನ ಮಾರುಕಟ್ಟೆ ‌ಸಮಿತಿಯ ವ್ಯಾಪಾರಿಗಳು, ರೈತರು ಹಾಗೂ ಸಮಾಜ ಸೇವಕರೊಂದಿಗೆ ಕರೆಯಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖಾಸಗಿ ತರಕಾರಿ ಜೈ ಕಿಸಾನ್ ಭಾಜಿ ಮಾರ್ಕೆಟ್ ಗೆ ಅಧಿಕಾರಿಗಳು ದಾಖಲೆಗಳನ್ನು ತಿರುಚಿ, ಮೃತಪಟ್ಟ ವ್ಯಕ್ತಿ ಹೆಸರಿನಲ್ಲಿ‌‌ ಎನ್ ಲೇಔಟ್ ಮಾಡಿ ಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ತನಿಖೆ ಮಾಡಿಸಿ ಯಾರೇ ತಪ್ಪಿತಸ್ಥರು ಇದ್ದರೂ ಅವರ ಮೇಲೆ ತನಿಖೆ ಮಾಡಲಾಗುವುದು ಎಂದರು.

ಖಾಸಗಿ ಮಾರುಕಟ್ಟೆ‌ ನಿರ್ಮಾಣ ಮಾಡಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳು ಕಾನೂನು‌ ಉಲ್ಲಂಘನೆ ಮಾಡಿದರೆ ಎಪಿಎಂಸಿ, ಹೆಸ್ಕಾಂ, ಪಾಲಿಕೆ, ಬುಡಾದಿಂದ ಅಕ್ರಮಕ್ಕೆ‌ ಅನಕೂಲ ಮಾಡಿದ್ದರೆ, ಅದನ್ನು ತನಿಖೆ‌ ಮಾಡಿಸಿ ನೋಟಿಸ್ ಜಾರಿ ಮಾಡಿ ತಪ್ಪಿತಸ್ತರ ವಿರುದ್ಧ‌ ಕ್ರಮ ಜರುಗಿಸಲು ಸರಕಾರಕ್ಕೆ ಪತ್ರ ಕರೆಯಲಾಗುವುದು ಎಂದು ಹೇಳಿದರು.

ಇದಕ್ಕೂ ಮುನ್ನ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಸಿದಗೌಡ ಮೊದಗಿ ಮಾತನಾಡಿ, 85 ಎಕರೆ ವಿಶಾಲ ಪ್ರದೇಶದಲ್ಲಿ ಬೆಳಗಾವಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿ ಇದೆ.ಆದರೆ ಅನಧಿಕೃತವಾಗಿ ಫಲವತ್ತಾದ ಕೃಷಿ‌ ಭೂಮಿಯಲ್ಲಿ 2011ರಲ್ಲಿ ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿ 2014ರಲ್ಲಿ ಎನ್ ಎ ಲೇಔಟ್ ಮಾಡಿಸಿರುವ, ಜೈ ಕಿಸಾನ್ ಭಾಜಿ ಮಾರ್ಕೇಟ್ ಗೆ ಅನುಮತಿ ‌ನೀಡಿದವರು ಯಾರು, ಲೈಸನ್ಸ್ ‌ನೀಡಿದ್ದು ಯಾಕೆ ಎನ್ನುವ ಪ್ರಶ್ನೆಗೆ ಅಧಿಕಾರಿಗಳು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರಕಾರ ಕೃಷಿ ಮಸೂದೆ ಕಾಯ್ದೆಯನ್ನು ಹಿಂಪಡೆದರೂ ಅಧಿಕಾರಿಗಳ ನಡುವಳಿಕೆಯಿಂದ ಖಾಸಗಿ ತರಕಾರಿ ಮಾರುಕಟ್ಟೆ ತಲೆ‌ ಎತ್ತಿರುವುದರಿಂದ ರೈತರ ತರಕಾರಿಯನ್ನು ಲಾಬಿ ಮಾಡುವುದು ಸರಿಯಲ್ಲ.

ಕಳೆದ 2019ರಲ್ಲಿ ಕೃಷಿ ಉತ್ಪನ ಮಾರುಕಟ್ಟೆ ಸಮಿತಿಯ‌ ಸಭೆಯಲ್ಲಿ ಬೆಳಗಾವಿಯಲ್ಲಿ ಖಾಸಗಿ ಮಾರುಕಟ್ಟೆ ‌ನಿರ್ಮಾಣ‌ ಮಾಡಲು ವಿರೋಧ ಇದೆ‌ ಎಂದು ಠರಾವು ಪಾಸ್ ಮಾಡಿದರೂ ಕೃಷಿ‌ ಮಾರಾಟ ಇಲಾಖೆಯ ನಿರ್ದೇಶಕರು ಜೈ ಕಿಸಾನ್ ಭಾಜಿ ಮಾರ್ಕೇಟ್ ಗೆ ಲೈಸನ್ಸ್ ‌ನೀಡಿದ್ದಲ್ಲದೆ, ರೈತರಿಗೆ ಉಡಾಫೆ ಉತ್ತರ ಕೊಡುತ್ತಿರುವುದು ಖಾಸಗಿ ತರಕಾರಿ‌ ಮಾರುಕಟ್ಟೆಯ ಪರ ಮೃದು ಧೋರಣೆ ಅನುಸರಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕರ್ನಾಟಕ ನವ ನಿರ್ಮಾಣ ಪಡೆಯ‌ ಅಧ್ಯಕ್ಷ‌ ರಾಜಕುಮಾರ ‌ಟೋಪಣ್ಣನವರ ಮಾತನಾಡಿ, ಬೆಳಗಾವಿ‌ ನಗರದಲ್ಲಿರುವ ಕೃಷಿ ‌ಉತ್ಪನ ಮಾರುಕಟ್ಟೆ ಸಮಿತಿ ಇರುವುದರಿಂದ ಸಂಚಾರ ಸಮಸ್ಯೆಯಾಗುತ್ತದೆ ಎಂದರೆ, ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ಹೊಂದಿಕೊಂಡಿರುವ ಖಾಸಗಿ ಮಾರುಕಟ್ಟೆಯಿಂದ ಸಂಚಾರ ಸಮಸ್ಯೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಈಗಾಗಲೇ ‌ಅನಧಿಕೃತವಾಗಿ ನಿರ್ಮಾಣ‌‌ ಮಾಡಿರುವ ಜೈ ಕಿಸಾನ್ ಭಾಜಿ‌ ಮಾರ್ಕೇಟ್ ಗೆ ಯಾವ ಆಧಾರದ ಮೇಲೆ‌ ಅನುಮತಿ‌ ನೀಡಿದ್ದೀರಿ ? ಇದು ರೈತರಿಗೆ, ವ್ಯಾಪಾರಿಗಳಿಗೆ ಮಾರಕವಾಗಿದ್ದು, ಇದರ ಲೈಸನ್ಸ್ ರದ್ದು ಪಡಿಸಬೇಕೆಂದು ಸಭೆಗೆ ಒತ್ತಾಯಿಸಿದರು.

ಖಾಸಗಿ ಜೈ ಕಿಸಾನ್ ಭಾಜಿ ಮಾರ್ಕೇಟ್ ನ ಕಾರ್ಯದರ್ಶಿ ಕೆ.ಕೆ.ಬಾಗವಾನ ಮಾತನಾಡಿ, ಸರಕಾರಿ ಎಪಿಎಂಸಿ ಹಾಗೂ ಖಾಸಗಿಯೊಂದಿಗೆ ಪೈಪೋಟಿ ಇರುವ ನಿಟ್ಟಿನಲ್ಲಿ ಮಾರುಕಟ್ಟೆ ನಿರ್ಮಾಣ ಮಾಡಲಾಗಿದೆ.‌ ನಾವು ಯಾವುದೇ ಕಾನೂನು ಉಲ್ಲಂಘನೆ ಮಾಡಿಲ್ಲ. ನಗರದಲ್ಲಿ ಸಂಚಾರ ಸಮಸ್ಯೆ ಸರಿಪಡಿಸಲು ಹಾಗೂ ರೈತರಿಗೆ ನ್ಯಾಯ ಸಮ್ಮತ ಬೆಲೆ‌ ನೀಡಲು ಮೂಲ ವ್ಯಾಪರಿಗಳು ಖಾಸಗಿ ಮಾರುಕಟ್ಟೆ ನಿರ್ಮಾಣ‌ ಮಾಡಲಾಗಿದೆ ಎಂದರು.

ಕೃಷಿ ಉತ್ಪನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ ಡಾ.ಕೆ.ಕೋಡಿಗೌಡ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ‌ ಘಾಳಿ, ಡಿಸಿಪಿ‌ ಪಿ.ವಿ.ಸ್ನೇಹಾ, ಎಪಿಎಂಸಿ ವ್ಯಾಪಾರಿಗಳಾದ‌ ಸತೀಶ ಪಾಟೀಲ, ಬಸನಗೌಡಾ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


Leave a Reply