Belagavi

ಮಾಧ್ಯಮ ಪ್ರಜಾಪ್ರಭುತ್ವದ ರಕ್ಷಕ: ಪ್ರೊ. ವಿಜಯ ನಾಗನ್ನವರ


ಬೆಳಗಾವಿ: ಸಮಾಜದ ಆಗು ಹೋಗುಗಳನ್ನು, ರಾಜಕೀಯ ವಿದ್ಯಮಾನಗಳ ಏರಿಳಿತಗಳನ್ನು ಸದಾ ಗಮನಿಸುವ ಮಾಧ್ಯಮಗಳು ದೀನರ, ದಲಿತರ ಮತ್ತು ದುರ್ಬಲರ ಹಿತಕ್ಕಾಗಿ ಕಾರ್ಯನಿರ್ವಹಿಸುವುದರ ಮೂಲಕ ಪ್ರಜಾಪ್ರಭುತ್ವದ ರಕ್ಷಕನಂತೆ ಕಾರ್ಯನಿರ್ವಹಿಸುತ್ತವೆ ಎಂದು ಆರ್‍ಸಿಯು ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಪ್ರೊ. ವಿಜಯ ನಾಗನ್ನವರ ಹೇಳಿದರು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ಜರುಗಿದ ಪುನಶ್ಚೇತನ ಕಾರ್ಯಕ್ರಮ ಹಾಗೂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.

ದೇಶದಲ್ಲಿ ಅನೇಕ ಬಾರಿ ರಾಜಕಾರಣಿಗಳು ಸಂವಿಧಾನದ ಆಶೋತ್ತರಗಳನ್ನು ಗಾಳಿಗೆ ತೂರಿ ಸ್ವಜನ ಪಕ್ಷಪಾತ ಮತ್ತು ದುರಾಡಳಿತ ನಡೆಸಿದಾಗ, ಮಾಧ್ಯಮಗಳು ಆ ರಾಜಕಾರಣಿಗಳ ವಿರುದ್ಧ ಜನಜಾಗೃತಿ ಮೂಡಿಸಿ, ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿವೆ. ಮಾಧ್ಯಮಗಳು ಭ್ರಷ್ಟ ರಾಜಕಾರಣಿ ಮತ್ತು ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿ ಕಾಟ ನೀಡಿದ ಪರಿಣಾಮ ಸರ್ಕಾರದಲ್ಲಿ ಕೆಲವೆಡೆ ಉತ್ತಮ ಆಡಳಿತ ಕಾಣಬಹುದಾಗಿದೆ ಎಂದರು.

ಎದೆಗಾರಿಕೆ ಮತ್ತು ವೇಗ ಪತ್ರಕರ್ತರಲ್ಲಿ ಇರಬೇಕಾದ ಬಹುಮುಖ್ಯ ಗುಣಗಳು. ಈ ಗುಣಗಳನ್ನು ಪತ್ರಿಕೋದ್ಯಮದ ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು. ಪತ್ರಕರ್ತರು ಅನೇಕ ಒತ್ತಡ ಮತ್ತು ಬೆದರಿಕೆಗಳನ್ನು ಏದುರಿಸಬೇಕಾಗುತ್ತದೆ. ಆ ಸಂಗತಿಗಳಿಗೆಲ್ಲ ಜಗ್ಗದೇ, ಸಮಾಜದ ಒಳತಿಗೆ ಕಾರ್ಯನಿರ್ವಹಿಸಲು ಪತ್ರಕರ್ತರು ಮುಂದಾಗಬೇಕು. ಮಾಧ್ಯಮಗಳು ಸಾಮಾಜಿಕ ಕಳಕಳಿಯನ್ನು ತೊರೆದರೆ ಮತ್ತು ಪತ್ರಕರ್ತರು ಭ್ರಷ್ಟವಾದರೆ, ನಾಗರಿಕ ಸಮಾಜವು ಪತನ ಹೊಂದುವುದು ಎಂದು ನುಡಿದರು.

ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರಾದೇಶಿಕ ಭಾಷೆಯ ಜೊತೆಗೆ ಇಂಗ್ಲೀಷ್‍ಗೂ ಹೆಚ್ಚಿನ ಆದ್ಯತೆ ನೀಡಬೇಕು. ಬಹುಭಾಷಾ ಪಾಂಡಿತ್ಯ ಹೊಂದಿದವರಿಗೆ ಪತ್ರಿಕೋದ್ಯಮದಲ್ಲಿ ಬಹಳಷ್ಟು ಅವಕಾಶಗಳನ್ನು ಬಾಚಿ ಕೊಳ್ಳಬಹುದು. ಇಂಗ್ಲೀಷ್ ಭಾಷೆಯ ಮೇಲೆ ಹಿಡಿತ ಸಾಧಿಸಿದರೆ, ನವ ನವ ಅವಕಾಶಗಳು ಉತ್ತಮ ಪತ್ರಕರ್ತರಿಗೆ ಅರಸಿ ಬರುವವು ಎಂದು ತಿಳಿಸಿದರು.

ಮತ್ತೋರ್ವ ಮುಖ್ಯ ಅತಿಥಿಯಾದ ಪ್ರೊ. ವಿನಾಯಕ ಬಂಕಾಪುರ ಮಾತನಾಡಿ, ಮಾಧ್ಯಮದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿಯಿರುವ ವಿದ್ಯಾರ್ಥಿಗಳು ನೀವು ಸತತ ಓದು ಮತ್ತು ಬರವಣಿಗೆ ಕಲೆಯನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಪತ್ರಿಕೋದ್ಯಮದಲ್ಲಿ ಅನಾನ್ಯ ಅವಕಾಶಗಳು ನಿಮಗೆ ದೊರೆಯುತ್ತವೆ. ಪತ್ರಿಕೋದ್ಯಮ ವೃತ್ತಿಯಲ್ಲಿ ವೇಗ ಮತ್ತು ಸಮಯಕ್ಕೆ ಬಹಳ ಮಹತ್ವ ನೀಡಲಾಗುತ್ತದೆ. ಒಂದು ಸುದ್ದಿ ತ್ವರಿತವಾಗಿ ನೀಡಿದಾಗ ಮಾತ್ರ ಅದು ಸಮಾಜದ ಮೇಲೆ ಪ್ರಭಾವ ಬೀರಲು ಸಾಧ್ಯ. ಹಾಗಾಗೀ ವೇಗವಾಗಿ ಕಾರ್ಯನಿರ್ವಹಿಸುವುದನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ವಿಭಾಗದ ಮುಖ್ಯಸ್ಥೆ ಪ್ರೊ. ಕಮಲಾಕ್ಷಿ ತಡಸದ ಮಾತನಾಡಿ, ವಿದ್ಯಾರ್ಥಿಗಳು ಆಸಕ್ತಿಯಿಂದ ಕಲಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಗಡಿಭಾಗದಲ್ಲಿ ಪತ್ರಿಕೋದ್ಯಮದ ಉತ್ಕøಷ್ಟ ಶಿಕ್ಷಣ ನೀಡಲು ಆರ್‍ಸಿಯು ಕಾಳಜಿ ವಹಿಸುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಸಾರ ಪ್ರಸಕ್ತ ದಿನಗಳ ಅವಶ್ಯಕತೆ ಅನುಗುಣವಾಗಿ ಪತ್ರಿಕೋದ್ಯಮ ಶಿಕ್ಷಣ ನೀಡಲು ಆರ್‍ಸಿಯು ಮುಂದಾಗಿದ ಎಂದರು.

ಕಾರ್ಯಕ್ರಮದಲ್ಲಿ ಬೋಧಕ ಸಿಬ್ಬಂದಿ ವಿದ್ಯಾಶ್ರೀ ಹಾಲಕೇರಿಮಠ, ಪೂಜಾ ಹೆಗಡೆ, ಅರುಣ ಹೊಸಮಠ ಮತ್ತು ಬೋಧಕೇತರ ಸಿಬ್ಬಂದಿಯಾದ ವೈಭವ ಮಿಸಾಳೆ ಇದ್ದರು. ಪ್ರಥಮ ವರ್ಷದ ವಿದ್ಯಾರ್ಥಿಗಳಾದ ರಾಘವೇಂದ್ರ ಸನದಿ ಮತ್ತು ಸಂಜೀವಿನಿ ಉಳ್ಳೆಗಡ್ಡಿ ತಮ್ಮ ಅನಿಸಿಕೆ ಹಂಚಿಕೊಂಡರು.ಪ್ರವೀಣ ಹಡಪದ ಸ್ವಾಗತಿಸಿದರು. ಪರಶುರಾಮ ಮುಕನ್ನವರ ವಂದಿಸಿದರು. ಆನಂದ ತುಳಸಿಕಟ್ಟಿ ನಿರೂಪಿಸಿದರು.


Leave a Reply