BallaryKoppal

ಮುಖ್ಯಮಂತ್ರಿಗಳಿ0ದ ಸ್ವಾಭಿಮಾನಿ ರೈತ ಗುರುತಿನ ಚೀಟಿ ಬಿಡುಗಡೆ: ಬಿ.ಸಿ.ಪಾಟೀಲ್


ಕೊಪ್ಪಳ ಜ.08  : ಜ.09 ರಂದು ನಡೆಯಲಿರುವ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಜಿಲ್ಲೆಯ ರೈತರಿಗೆ ಸ್ವಾಭಿಮಾನಿ ರೈತ ಎಂಬ ಗುರುತಿನ ಚೀಟಿಯನ್ನು ಮುಖ್ಯಮಂತ್ರಿಗಳು ವಿತರಿಸಲಿದ್ದಾರೆ ಎಂದು ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಅವರು ತಿಳಿಸಿದರು.
ಶುಕ್ರವಾರದಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜ.09 ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಪೂರ್ವಸಿದ್ಧತೆ ಹಾಗೂ ಇತರೆ ಅಭಿವೃದ್ಧಿ ವಿಷಯಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಕೊಪ್ಪಳ ಜಿಲ್ಲೆಯ ರೈತರಿಗೆ ಸ್ವಾಭಿಮಾನಿ ರೈತ ಎಂಬ ಗುರುತಿನ ಚೀಟಿಯನ್ನು ವಿತರಿಸಲಾಗುತ್ತಿದೆ. ಸದ್ಯ ಜಿಲ್ಲೆಯ 1.5 ಲಕ್ಷ ರೈತರಿಗೆ ಗುರುತಿನ ಚೀಟಿಯನ್ನು ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ರೈತರಿಗೂ ಗುರುತಿನ ಚೀಟಿಯನ್ನು ನೀಡಲಾಗುವುದು. ಈ ಗುರುತಿನ ಚೀಟಿಯು ರೈತರ ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಸಂಖ್ಯೆ, ಆರ್‌ಟಿಸಿ ವಿವರಗಳು, ವಿಳಾಸ ಸೇರಿದಂತೆ ಅಗತ್ಯ ವಿವರಗಳನ್ನು ಒಳಗೊಂಡಿರುತ್ತದೆ ಎಂದು ಮಾಹಿತಿ ನೀಡಿದ ಅವರು, ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರಕ್ಕೆ ಒಂದರAತೆ 20 ಮಣ್ಣು ಪರೀಕ್ಷೆ ಸಂಚಾರಿ ವಾಹನಗಳನ್ನು ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದಾರೆ. ಸಂಚಾರಿ ವಾಹನಗಳು ಗ್ರಾಮಗಳಲ್ಲಿಯೂ ಸಂಚರಿಸುವುದರಿAದ ಅಲ್ಲಿನ ಮಣ್ಣು ಪರೀಕ್ಷೆ ಹಾಗೂ ಕೃಷಿ ಬೆಳೆಗಳನ್ನು ಕಾಡುವ ರೋಗಗಳ ಬಗ್ಗೆ ಪರೀಕ್ಷೆ ಮಾಡಬಹುದು. ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ತಮ್ಮ ಭಾಗದ ರೈತರಿಗೆ ಸಂಚಾರಿ ವಾಹನಗಳ ಸೌಲಭ್ಯವನ್ನು ಒದಗಿಸಬೇಕು ಎಂದು ಅವರು ತಿಳಿಸಿದರು.
ರಾಜ್ಯದಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಿದ್ದು, ಜಿಲ್ಲೆಯ ಎಲ್ಲಾ ಶಿಕ್ಷಕರಿಗೂ ಪ್ರತಿ ಶನಿವಾರ ಹಾಗೂ ಭಾನುವಾರ ಕ್ಯಾಂಪ್‌ಗಳನ್ನಾಗಿ ಮಾಡಿ ಕೋವಿಡ್ ಪರೀಕ್ಷೆ ಮಾಡಿಸಲು ಅಗತ್ಯ ಕ್ರಮ ಕೈಗೊಳ್ಳಿ. ದೇಶದಾದ್ಯಂತ ಕೋವಿಡ್-19 ಲಸಿಕೆಯ ಡ್ರೆöÊ ರನ್ ಕಾರ್ಯ ಆರಂಭವಾಗಿದ್ದು, ಲಸಿಕೆ ವಿತರಣೆಗೆ ವ್ಯವಸ್ಥಿತ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಿ. ಜಿಲ್ಲೆಯಲ್ಲಿ 69 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ಇಲಾಖೆಗಳ 10,335 ಕಾರ್ಯಕರ್ತರನ್ನು ಲಸಿಕೆ ವಿತರಣೆ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಲ್ಲಿ ರೈತರಿಂದ ಭತ್ತ ಖರೀದಿಸಲು ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಪ್ರಸ್ತುತ 540 ಜನ ರೈತರು ಮಾತ್ರ ನೋಂದಣಿ ಮಾಡಿಕೊಂಡಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ನೋಂದಣಿ ಮಾಡಿಕೊಳ್ಳುವಂತೆ ಜಾಗೃತಿ ಮೂಡಿಸಿ. ಎ.ಪಿ.ಎಂ.ಸಿ ವ್ಯಾಪ್ತಿಯಲ್ಲಿ ತೊಗರಿ ಖರೀದಿ ಪ್ರಕ್ರಿಯೆನ್ನು ಕೂಡಲೇ ಆರಂಭಿಸಿ. ಜಿಲ್ಲೆಯ ಗಂಗಾವತಿ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಚಿರತೆ ಸೆರೆಗೆ ಅಗತ್ಯ ಕ್ರಮಗಳನ್ನು ಕೈಗೊಂಡು ಸಾರ್ವಜನಿಕರಲ್ಲಿನ ಭಯವನ್ನು ಹೋಗಲಾಡಿಸಿ ಎಂದು ಅವರು ಸಂಬAಧಿಸಿದ ಇಲಾಖೆಗಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಅಂಜನಾದ್ರಿ ಬೆಟ್ಟದ ರೋಪ್ ವೇ ನಿರ್ಮಾಣ, ಗಣಿ ಇಲಾಖೆಗೆ ಸಂಬAಧಿಸಿದ ವಿಷಯಗಳು, ಅನುಷ್ಠಾನ ಏಜೆನ್ಸಿಗಳ ಪ್ರಗತಿ, ಹಕ್ಕಿ ಜ್ವರದ ಕುರಿತು ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಭೆಯಲ್ಲಿ ಶಾಸಕರಾದ ರಾಘವೇಂದ್ರ ಕೆ.ಹಿಟ್ನಾಳ, ಅಮರೇಗೌಡ ಪಾಟೀಲ ಬಯ್ಯಾಪೂರ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಶಶಿಧರ, ಅಪರ ಜಿಲ್ಲಾಧಿಕಾರಿ ಎಂ.ಪಿ.ಮಾರುತಿ, ಜಿ.ಪಂ. ಉಪಕಾರ್ಯದರ್ಶಿ ಶರಣಬಸವರಾಜ, ಸಹಾಯಕ ಆಯುಕ್ತರಾದ ನಾರಾಯಣರೆಡ್ಡಿ ಕನಕರೆಡ್ಡಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ವರ್ಣಿತ್ ನೇಗಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.


Leave a Reply