ಸಫಾಯಿ ಕರ್ಮಚಾರಿಗಳ ಪುನರ್‍ಸಮೀಕ್ಷೆ ಶೀಘ್ರ: ಅಧ್ಯಕ್ಷ ಹನುಮಂತಪ್ಪ

0

ಬಳ್ಳಾರಿ, ಜ.08 : ಸಮಾಜದ ಕಟ್ಟಕಡೆಯ ಸಮುದಾಯವಾಗಿರುವ ಸಫಾಯಿ ಕರ್ಮಚಾರಿಗಳನ್ನು ಮುಖ್ಯ ವಾಹಿನಿಗೆ ತರುವ ಮೂಲಕ ಅವರನ್ನು ಇತರೆ ಬೇರೆ ವೃತ್ತಿಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು, ರಾಜ್ಯದಲ್ಲಿರುವ ಸಫಾಯಿ ಕರ್ಮಚಾರಿಗಳ ನಿಖರ ಅಂಕಿ-ಸಂಖ್ಯೆ ಗುರುತಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಪುನರ್‍ಸಮೀಕ್ಷೆ ಶೀಘ್ರದಲ್ಲಿಯೇ ನಡೆಸಲು ನಿರ್ಧರಿಸಲಾಗಿದ್ದು, ಆರಂಭಿಕವಾಗಿ ಬಳ್ಳಾರಿ ಮತ್ತು ಮೈಸೂರಿನಲ್ಲಿ ಈ ಪುನರ್ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು,ನಂತರ ಇಡೀ ರಾಜ್ಯಕ್ಕೆ ವಿಸ್ತರಿಸಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ಅವರು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆಸಿದ ಸಮೀಕ್ಷೆ ಅನುಸಾರ ರಾಜ್ಯದಲ್ಲಿ ಸಫಾಯಿ ಕರ್ಮಚಾರಿಗಳ ಸಂಖ್ಯೆಯು 1,42,291 ಹಾಗೂ ಅವಲಂಬಿತರು ಸೇರಿ 18ಲಕ್ಷ ದಷ್ಟಾಗಲಿದೆ. ಆದರೇ ಈ ಸಂಖ್ಯೆಯು ತುಂಬಾ ಹಳೆಯದಾಗಿದೆ. ಈ ಸಮೀಕ್ಷೆಉಯಲ್ಲಿ ಕೇವಲ ನಗರಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಮಾತ್ರ ಪರಿಗಣಿಸಲಾಗಿದೆ. ಆದರೆ ಖಾಸಗಿ/ಸರ್ಕಾರಿ, ಅರೆ ಸರ್ಕಾರಿ, ಆಸ್ಪತ್ರೆ, ಮಲ್ಟಿಸೋರ್ಸ್ ಮುಂತಾದ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ಪರಿಗಣಿಸಿಲ್ಲ; ಶೀಘ್ರ ನಡೆಸುವ ಹೊಸ ಸಮೀಕ್ಷೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರನ್ನು ಸೇರಿದಂತೆ ಇವರನ್ನು ಪರಿಗಣಿಸಲು ಉದ್ದೇಶಿಸಲಾಗಿದ್ದು, ಅಂದಾಜು 3ಲಕ್ಷ ಸಫಾಯಿ ಕರ್ಮಚಾರಿಗಳು ಮಾಹಿತಿ ಸಿಗುವ ನಿರೀಕ್ಷೆ ಇದೆ. ಸಮೀಕ್ಷಾ ಕಾರ್ಯವನ್ನು ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ನಡೆಸಲಿದ್ದು, ಸಫಾಯಿ ಕರ್ಮಚಾರಿಗಳು ಹಾಗೂ ಅವಲಂಬಿತರ ನಿಖರ ಮಾಹಿತಿ ಸಿಗಲಿದ್ದು,ಅದರನುಸಾರ ಮುಂದಿನ ಅರ್ಥಿಕ ವರ್ಷಕ್ಕೆ ಅವರ ಸಮಗ್ರ ಅಭಿವೃದ್ಧಿಗೆ ನಿಗಮ ಕ್ರಿಯಾಯೋಜನೆ ರೂಪಿಸಿ ಕಾರ್ಯಪ್ರವೃತ್ತರಾಗಲಿದೆ ಎಂದು ಅವರು ಹೇಳಿದರು.
ಹೊಸ ಯೋಜನೆಗಳು ಚಿಂತನೆ: ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಲ್ಲಿ ಗಂಗಾಕಲ್ಯಾಣ, ನೇರಸಾಲ,ಸ್ವಯಂ ಉದ್ಯೋಗ,ಐರಾವತ, ಭೂಒಡೆತನದಂತ ಯೋಜನೆಗಳಿವೆ. ಈ ಯೋಜನೆಗಳ ಜೊತೆಗೆ ಸಫಾಯಿ ಕರ್ಮಚಾರಿಗಳ ಸಮಗ್ರ ಅಭಿವೃದ್ಧಿಗೆ ಹೊಸಯೋಜನೆಗಳನ್ನು ಘೋಷಿಸಲು ಚಿಂತನೆ ನಡೆದಿದೆ ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷರಾದ ಹೆಚ್. ಹನುಮಂತಪ್ಪ ತಿಳಿಸಿದರು.
ನಿವೇಶನ ಮತ್ತು ವಸತಿ ಇರದ ಸಫಾಯಿ ಕರ್ಮಚಾರಿಗಳಿಗೆ ಸಕಲ ಸೌಕರ್ಯ ಒಳಗೊಂಡ ಸೂರು ಒದಗಿಸಲು ನಿಗಮ ಚಿಂತನೆ ನಡೆಸಿದೆ ಎಂದು ಅವರು ಹೇಳಿದರು.
ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮಕ್ಕೆ ಸರಕಾರ ನೀಡಿರುವ 66 ಕೋಟಿ ರೂ.ಗಳನ್ನು ಬರುವ ಫೆಬ್ರುವರಿ ಅಂತ್ಯದೊಳಗೆ ಖರ್ಚು ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ ಅಧ್ಯಕ್ಷ ಹನುಮಂತಪ್ಪ ಅವರು ಸಫಾಯಿ ಕರ್ಮಚಾರಿಗಳು ಹಾಗೂ ಅವರ ಅವಲಂಬಿತರ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರಕಾರ 1 ಸಾವಿರ ಕೋಟಿ ರೂ.ಗಳನ್ನು ನಿಗಮಕ್ಕೆ ನೀಡಬೇಕು ಎಂದು ಅವರು ಮನವಿ ಮಾಡಿದರು.
ಇದರ ಜತೆಗೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಮಗದಿಂದ 500 ಕೋಟಿ ನೀಡುವಂತೆ ಕೋರಲಾಗಿದೆ. 1500 ಕೋಟಿ ರೂ. ಅನುದಾನ ನೀಡಿದರೆ ಇನ್ನು 2 ವರ್ಷಗಳಲ್ಲಿ ಈ ಸಮುದಾಯದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ ಎಂದರು.
ಪೌರಕಾರ್ಮಿಕರು ಮತ್ತು ಒಳಚರಂಡಿ ಕಾರ್ಮಿಕರ ಮಧ್ಯೆ ಇರುವ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮ ಮತ್ತು ಸಫಾಯಿ ಕರ್ಮಚಾರಿ ಆಯೋಗವು ಜ.13ರಂದು ರಾಜ್ಯಮಟ್ಟದ ಸಭೆ ಕರೆದಿದೆ. ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಸರಕಾರದ ಉನ್ನತ ಅಧಿಕಾರಿಗಳು ಆ ಸಭೆಯಲ್ಲಿ ಭಾಗವಹಿಸಲಿದ್ದು ಸಭೆಯಲ್ಲಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗುವ ವಿಶ್ವಾಸವಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ದಮ್ಮೂರು ಶೇಖರ್ ಹಾಗೂ ಸಫಾಯಿ ಕರ್ಮಚಾರಿ ಇಲಾಖೆಯ ಅಧಿಕಾರಿಗಳು ಹಾಗೂ ಇತರರು ಇದ್ದರು.

- Advertisement -

- Advertisement -

Leave A Reply

Your email address will not be published.