BallaryBelagaviGadagkarwar uttar kannadaKoppalStatevijayapur

ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ `ಕೊಪ್ಪಳ ಟಾಯ್ ಕ್ಲಸ್ಟರ್’ ಮಹತ್ವದ ಪಾತ್ರ ವಹಿಸಲಿದೆ : ಬಿ.ಎಸ್. ಯಡಿಯೂರಪ್ಪ


ಕೊಪ್ಪಳ ಜ.೦೯ : ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ `ಕೊಪ್ಪಳ ಟಾಯ್ ಕ್ಲಸ್ಟರ್’ ಮಹತ್ವದ ಪಾತ್ರ ವಹಿಸಲಿದೆ ಎಂದು ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರು ಹೇಳಿದರು.

ಎಂ/ಎಸ್ ಎಕಸ್ ಸಂಸ್ಥೆಯ ವತಿಯಿಂದ ಜಿಲ್ಲೆಯ ಕುಕನೂರು ತಾಲ್ಲೂಕಿನ ಭಾನಾಪುರ ಗ್ರಾಮದಲ್ಲಿ ಶನಿವಾರದಂದು (ಜ.೦೯) ಆಯೋಜಿಸಲಾಗಿದ್ದ “ಕೊಪ್ಪಳದ ಆಟಿಕೆಗಳ ಕ್ಲಸ್ಟರ್’’ನ ಭೂಮಿ ಪೂಜೆ ಹಾಗೂ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಭಾರತದ ಮಟ್ಟಮೊದಲ ಆಟಿಕೆ ಉತ್ಪಾದನಾ ಕ್ಲಸ್ಟರ್ ನಿರ್ಮಾಣಕ್ಕೆ ಅತ್ಯಂತ ಸಂತೋಷದಿAದ ಇಂದು ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಪಾರಂಪರಿಕ ಕಿನ್ನಾಳ ಆಟಿಕೆಗೆ ಹೆಸರಾದ ಕೊಪ್ಪಳ ಜಿಲ್ಲೆ ಇದೀಗ ಆಟಿಕೆ ಉತ್ಪಾದನೆ ಕೇಂದ್ರವಾಗಿ ರೂಪುಗೊಳ್ಳುತ್ತಿರುವುದು ಸಂತೋಷದ ಸಂಗತಿ. ಎಕಸ್ ಸಂಸ್ಥೆಯವರು ಈ ಕ್ಲಸ್ಟರ್ ಅಭಿವೃದ್ಧಿ ಪಡೆಸುತ್ತಿದ್ದು, ಈ ಸಂಸ್ಥೆಯ ಅಧ್ಯಕ್ಷರಾದ ಅರವಿಂದ ಮೆಳ್ಳಗೇರಿ ಅವರು ನಮ್ಮ ರಾಜ್ಯದವರೇ ಆಗಿರುವುದು ಹೆಮ್ಮೆಯ ವಿಷಯವಾಗಿದೆ. ಈ ಆಟಿಕೆ ಕ್ಲಸ್ಟರ್ ಡಿಸೆಂಬರ್ ಒಳೆಗೆ ಕಾರ್ಯಾರಂಭ ಮಾಡಲಿದ್ದು, ಕಲ್ಯಾಣ ಕರ್ನಾಟಕದ ಅಭಿವೃದ್ಧಿ ನಕ್ಷೆಯಲ್ಲಿ ಗಮನಾರ್ಹ ಗುರುತಾಗಲಿದೆ. ಮುಂದಿನ ೫ ವರ್ಷಗಳಲ್ಲಿ ಸುಮಾರು ಐದು ಸಾವಿರ ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವ ನಿರೀಕ್ಷೆ ಹೊಂದಿದ್ದು, ೨೫ ಸಾವಿರ ನೇರ ಹಾಗೂ ೧ ಲಕ್ಷ ಪರೋಕ್ಷ ಉದ್ಯೋಗ ಸೃಷ್ಟಿ ಮಾಡಲಿದೆ. ಕಲ್ಯಾಣ ಕರ್ನಾಟಕ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ಈ ಆಟಿಕೆ ಕ್ಲಸ್ಟರ್ ಮಹತ್ವದ ಪಾತ್ರ ವಹಿಸಲಿದೆ ಎಂದರು.

ರಾಜ್ಯದ ಅಭಿವೃದ್ಧಿಗೆ ಅತೀ ಮುಖ್ಯ ಅಂಶಗಳಾದ ಕೃಷಿ ಮತ್ತು ಕೈಗಾರಿಕೆಗಳೆರಡಕ್ಕೂ ನಮ್ಮ ಸರ್ಕಾರ ಸಮಾನ ಆದ್ಯತೆ ನೀಡುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ಮಹತ್ತರ ಕಾನೂನು ಸುಧಾರಣೆಗಳನ್ನು ಮಾಡಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೈಗಾರಿಕೆಗೆ ಭೂಮಿ ಪಡೆಯುವುದರಲ್ಲಿನ ತೊಡಕುಗಳನ್ನು ನಿವಾರಿಸಲಾಗಿದೆ. ಅಂತಯೇ ಹೊಸದಾಗಿ ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸುವ ಆಸಕ್ತರಿಗೆ ಕೃಷಿ ಭೂಮಿ ಖರೀದಿಸಲು ಸಹ ಅವಕಾಶ ಒದಗಿಸಲಾಗಿದೆ. ಇದರಲ್ಲಿ ರೈತರ ಹಿತ ಕಾಯುವ ಷರತ್ತುಗಳು ಇವೆ. ನಮ್ಮ ಸರ್ಕಾರವು ಕೈಗಾರಿಕಾ ನೀತಿ-೨೦೨೦-೨೫ನ್ನು ಜಾರಿಗೆ ತಂದಿದೆ. ಈ ನೀತಿಯನ್ವಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಕೈಗಾರಿಕೆಗಳನ್ನು ರಾಜ್ಯದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಆದ್ಯತೆ ನೀಡಲಾಗಿದೆ. ಕೈಗಾರಿಕೆಯ ಮೂಲಕ ಸೌಕರ್ಯ ತಿದ್ದುಪಡಿ, ಭೂ ಸ್ಮಧಾರಣೆ ಕಾಯ್ದೆ ತಿದ್ದುಪಡಿ, ಉದ್ಯಮ ಪ್ರಸ್ತಾಪಗಳ ತ್ವರಿತ ಅನುಮೋದನೆ ಇತ್ಯಾದಿ ಕ್ರಮಗಳಿಂದ ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಯಾಗಿದ್ದು, ಹೂಡಿಕೆಯ ಪ್ರಸ್ತಾಪಗಳು ವೃದ್ಧಿಸಿವೆ ಎಂದು ಹೇಳಿದರು.

೨, ೩ನೇ ಹಂತದ ನಗರಗಳಲ್ಲಿ ಕೈಗಾರಿಕೆಗಳನ್ನು ಆಕರ್ಷಿಸುವ ಮೂಲಕ ವಲಯ ನಿರ್ದಿಷ್ಟ ಕ್ಲಸ್ಟರ್‌ಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ, ರಾಜ್ಯದಲ್ಲಿ ಕೈಗಾರಿಕೆ ಟೌನ್‌ಶಿಪ್‌ಗಳನ್ನು ನಿರ್ಮಿಸಲಾಗುತ್ತಿದೆ. ಮುಖ್ಯವಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ವತಿಯಿಂದ ಹಂಚಿಕೆ ಮಾಡಲಾಗುವ ಭೂಮಿಗಳ ದರದ ಬಗ್ಗೆ ವ್ಶೆಜ್ಞಾನಿಕ ನೀತಿ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ಕೇಂದ್ರಿತ ಕೈಗಾರಿಕೆಗಳ ಸ್ಥಾಪನೆ ತಪ್ಪಿಸಲು ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್, ಹುಬ್ಬಳ್ಳಿ ಧಾರವಾಡದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್, ಯಾದಗಿರಿ ಜಿಲ್ಲೆಯಲ್ಲಿ ಫಾರ್ಮಾ ಕ್ಲಸ್ಟರ್ ಅಭಿವೃದ್ಧಿ ಪಡಿಸಲಾಗುತ್ತಿದೆ. ಕೈಗಾರಿಕೆಗಳ ಸ್ಥಾಪನೆಯಿಂದ ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿದ್ದು, ಈ ಭಾಗದ ಯುವ ಜನರು ಉದ್ಯೋಗ ಅರಸಿ ಬೇರೆ ನಗರಗಳಿಗೆ ಹೋಗುವ ಪ್ರಮಾಣ ತಗ್ಗುವ ವಿಶ್ವಾಸವಿದೆ. ಕರ್ನಾಟಕವನ್ನು ವಿಶ್ವ ದರ್ಜೆಯ ಔದ್ಯಮಿಕ ಜಾಲವಾಗಿ ಅಭಿವೃದ್ಧಿ ಪಡಿಸಲು ಚೆನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್‌ನ ಭಾಗವಾಗಿ ತುಮಕೂರಿನಲ್ಲಿ ಕೈಗಾರಿಕಾ ನೋಡ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ೧,೭೦೧ ಕೋಟಿ ರೂ. ಮೀಸಲಿರಿಸಿದ್ದು, ಇದರಿಂದ ಅಂದಾಜು ೮೮,೫೦೦ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಪುಟ ಸಹದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನಮ್ಮ ರಾಜ್ಯ ಉದ್ಯಮಸ್ನೇಹಿ ರಾಜ್ಯಗಳ ಪಟ್ಟಿಯಲ್ಲಿ ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದುಕೊಂಡಿದೆ. ಬೃಹತ್ ಕೈಗಾರಿಕೆ ಮಾತ್ರವಲ್ಲದೆ, ಸೂಕ್ಷ್ಮ, ಸಣ್ಣ, ಮಧ್ಯಮ ಕೈಗಾರಿಕೆಗಳು ಕೂಡ ರಾಜ್ಯದಲ್ಲಿ ಪ್ರಗತಿಯಲ್ಲಿವೆ. ಸುಲಲಿತ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸ್ವಯಂ ಘೋಷಣೆ ಪತ್ರ ಮುಖೇನ ಕೈಗಾರಿಕೆಗಳ ಸ್ಥಾಪನೆ ಪ್ರಕ್ರಿಯೆಯನ್ನು ಸರಳೀಕೃತಗೊಳಿಸುವ ಯೋಜನೆಯನ್ನು ನಮ್ಮ ಸರ್ಕಾರ ಜಾರಿಗೊಳಿಸಿದೆ. ಲಾಕ್‌ಡೌನ್ ಇದ್ದಾಗಲೂ ಉತ್ಪಾದನೆಗೆ ತೊಡಕಾಗದಂತೆ ಉದ್ಯಮಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಜನಜೀವನ ಹಾಗೂ ಆರ್ಥಿಕತೆಯ ನಡುವೆ ಸಮತೋಲನ ಕಾಯ್ದುಕೊಂಡಿದೆ. ಕಳೆದ ಸಾಲಿನಲ್ಲಿ ದೇಶದಲ್ಲಿ ವಿವಿಧ ಕೈಗಾರಿಕೆಗಳನ್ನು ಸ್ಥಾಪಿಸಲು ಒಟ್ಟು ೧೧೮೮ ಬಂಡವಾಳ ಹೂಡಿಕೆ ಪ್ರಸ್ತಾಪಗಳು ಸ್ವೀಕೃತವಾಗಿದ್ದು, ಈ ಪೈಕಿ ೧.೫೪ ಲಕ್ಷ ಕೋಟಿ ರೂ. ಮೌಲ್ಯದ ೯೫ ಹೂಡಿಕೆ ಪ್ರಸ್ತಾವನೆಗಳು ರಾಜ್ಯದ ಪಾಲಾಗಿವೆ. ಆದರೆ ದೇಶದ ಒಟ್ಟು ಹೂಡಿಕೆ ಪ್ರಸ್ತಾವನೆಗಳಲ್ಲಿ ರಾಜ್ಯದ ಪಾಲು ಶೇ.೪೧ ರಷ್ಟಿದೆ ಎಂದು ತಿಳಿಸಿದರು.

ಕೊಪ್ಪಳ ಜಿಲ್ಲೆಯಲ್ಲೆ ವಿಶ್ವವಿದ್ಯಾಲಯ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲೆಯ ನೂತನ ತಾಲ್ಲೂಕು ಆದ ಕುಕನೂರಿನಲ್ಲಿ ಮಿನಿ ವಿಧಾನ ಸೌಧ ಸ್ಥಾಪನೆಗೆ ಮನವಿ ಬಂದಿದ್ದು, ಈ ಬಗ್ಗೆ ಸಚಿವ ಸಂಪುಟದಲ್ಲಿ ತೀರ್ಮಾನಿಸಿ, ಮುಂದಿನ ಬಜೆಟ್ ಅಧಿವೇಶನದಲ್ಲಿ ಅನುಮೋದನೆ ನೀಡಲಾಗುವುದು. ಏತ ನೀರಾವರಿ ಯೋಜನೆಗೆ ಹಂತ ಹಂತವಾಗಿ ಅನುಮೋದನೆ ನೀಡುತ್ತೇವೆ. ಈಗಾಗಲೇ ಕಾಮಗಾರಿ ನಡೆಯುತ್ತಿದ್ದು, ಹಂತ ಹಂತವಾಗಿ ಪ್ರಥಮ ೬೫೦ ಕೋಟಿ, ದ್ವಿತೀಯ ೬೫೦ ಕೋಟಿ ಹಾಗೂ ತೃತೀಯ ೪೫೦ ಕೋಟಿ ಸೇರಿ ಮೂರು ಹಂತದಲ್ಲಿ ಒಟ್ಟು ರೂ. ೧೭೫೦ ಕೋಟಿ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಕೃಷಿ ವಾಹನಗಳಿಗೆ ಇಂದು ಚಾಲನೆ ನೀಡಿದ್ದು, ಸಂತಸ ವಿಷಯವಾಗಿದೆ ಎಂದು ಹೇಳಿದರು.

ದೇಶದ ಮೊದಲ ಆಟಿಕೆ ಕ್ಲಸ್ಟರ್ ಕೊಪ್ಪಳದಲ್ಲಿ ಹೂಡಿಕೆ ಮಾಡುವಂತೆ ದೇಶ ಮತ್ತು ವಿದೇಶದ ಆಟಿಕೆ ತಯಾರಕರಿಗೆ ಕರ್ನಾಟಕ ಮುಕ್ತ ಆಹ್ವಾನ ನೀಡಿದೆ. ಆತ್ಮ ನಿರ್ಭರ್ ಭಾರತ ಅಭಿಯಾನದ ಅಡಿಯಲ್ಲಿ ‘ವೋಕಲ್ ಫಾರ್ ಲೋಕಲ್’ ಎಂಬ ಪ್ರಧಾನಿ ನರೇಂದ್ರ ಮೋದಿ ಜಿ ಅವರು ನೀಡಿರುವ ಕರೆಗೆ ಪೂರಕವಾಗಿ ಕರ್ನಾಟಕ ಆಟಿಕೆ ತಯಾರಿಕೆಗೆ ಒತ್ತು ನೀಡಿ, ದೇಶ ಮತ್ತು ವಿದೇಶದ ಆಟಿಕೆ ತಯಾರಕರಿಗೆ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡುತ್ತೇವೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ, ಜನ ಜೀವನ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕೊಪ್ಪಳ ಆಟಿಕೆ ಕ್ಲಸ್ಟರ್ ನಿಗದಿತ ಸಮಯಕ್ಕೆ ಕಾರ್ಯಾರಂಭ ಮಾಡಲಿ. ಕಲ್ಯಾಣ ಕರ್ನಾಟಕದ ಆರ್ಥಿಕ ಬೆಳವಣಿಗೆಗೆ ಉತ್ತೇಜನ ದೊರೆಯಲಿ ಎಂದು ಹಾರೈಸುತ್ತೇನೆ ಎಂದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ಯಮೆಗಳ ಸಚಿವರಾದ ಜಗದೀಶ ಶೆಟ್ಟರ ಅವರು ಮಾತನಾಡಿ, ಇಂದು ಇತಿಹಾಸ ನಿರ್ಮಿಸುವ ಕಾರ್ಯಕ್ರಮ ನಡೆಯುತ್ತಿದೆ. ಟಾಯ್ ಕ್ಲಸ್ಟರ್ ಕೊಪ್ಪಳಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಬದಲಿಗೆ ಕಲ್ಯಾಣ ಕರ್ನಾಟಕಕ್ಕೆ ಅನುಕೂಲ ಆಗಲಿದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ನೀಡಿದ್ದು, ನಾಲ್ಕು ಸಾವಿರ ಕೋಟಿ ಬಂಡವಾಳ ಹೂಡಲಾಗುತ್ತದೆ. ಉಳಿದ ಎಲ್ಲ ಉದ್ಯೋಗಗಳನ್ನು ಸ್ಥಳೀಯರಿಗೆ ನೀಡಬೇಕು ಎಂದು ಕೈಗಾರಿಕಾ ನೀತಿಯಲ್ಲಿ ಸೇರಿಸಲಾಗಿದೆ. ಸ್ಥಳೀಯರಿಗೆ ಉದ್ಯೋಗ ನೀಡದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಕಡೆಚೂರು ಇಂಡಸ್ಟಿçಯಲ್ ಹಾಗೂ ಯಾದಗಿರಿಯಲ್ಲಿ ಪಾರ್ಮಾ ಪಾರ್ಕ್ ಆಗುವ ಸಾಧ್ಯತೆ ಇದೆ. ಇದರಿಂದಲೂ ಸಾವಿರಾರೂ ಜನರಿಗೆ ಉದ್ಯೋಗ ಸಿಗಲಿದೆ. ಬಂಡವಾಳ ಆಕರ್ಷಣೆ ಮಾಡುವುದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ ಎಂದರು.

ಕೃಷಿ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಅವರು ಮಾತನಾಡಿ, ಇಂದು ಜಗತ್ತಿನ ಕಿರೀಟದಲ್ಲಿ ಕೊಪ್ಪಳ ಮುತ್ತಾಗಿ ಸೇರಿಕೊಂಡಿದೆ. ಅಂತಹ ಯೋಜನೆಗೆ ಇಂದು ಚಾಲನೆ ದೊರೆತಿದೆ. ನೆಲ, ಜಲ ನಮ್ಮದು ಹಾಗಾಗಿ ಉದ್ಯೋಗದಲ್ಲಿ ಇಲ್ಲಿಯವರಿಗೆ ಮೊದಲ ಆದ್ಯತೆ ನೀಡಿ. ಕೊಪ್ಪಳದ ಸ್ಥಳೀಯ ಯುವ ಜನತೆಗೆ ಮೊದಲ ಆದ್ಯತೆ ನೀಡಬೇಕು. ಕೌಶಲಾಭಿವೃದ್ಧಿ ತರಬೇತಿ ಕೇಂದ್ರ ಟಾಯ್ ಕ್ಲಸ್ಟರ್‌ನ ಹತ್ತಿರವಿದ್ದು, ಹಾಗಾಗಿ ಇಲ್ಲಿನ ಕೇಂದ್ರದಲ್ಲಿ ಈ ಕ್ಲಸ್ಟರ್‌ಗೆ ಅವಶ್ಯವಿರುವ ಕೌಶಲ್ಯಗಳ ತರಬೇತಿ ಈ ಭಾಗದ ಯುವಕರಿಗೆ ನೀಡಬೇಕು. ಇದರಿಂದ ತಾಂತ್ರಿಕವಾಗಿಯೂ ಇಲ್ಲಿಯವರು ಉನ್ನತ ಹುದ್ದೆಗಳನ್ನು ಪಡೆಯಬಹುದು. ಜಿಲ್ಲೆಯಲ್ಲಿ ಇಂದು ಕೃಷಿ ಸಂಜೀವಿನಿಯ ೨೦ ವಾಹನಗಳನ್ನು ಬಿಡುಗಡೆ ಮಾಡಲಾಗಿದ್ದು, ಕೀಟ ಬಾಧೆಯಾಗಿದೆ ಎಂದು ರೈತರು ಕರೆ ಮಾಡಿದರೆ ಆ ವಾಹನ ಅಲ್ಲಿಗೆ ತೆರಳಿ ಹತೋಟಿ ಕ್ರಮ, ಸೂಕ್ತ ಮಾರ್ಗದರ್ಶನ ನೀಡಲಿದೆ. ಅಧಿಕಾರಿಗಳು ಹಾಗೂ ರಾಜಕಾರಣಿಗಳು ಮಾತ್ರ ಐಡಿ ಕಾರ್ಡ್ ಇಟ್ಟುಕೊಳ್ಳುತ್ತೇವೆ. ಆದರೆ ರೈತರು ಕೂಡಾ ಐಡಿ ಕಾರ್ಡ್ ಹೊಂದಬಹುದಾದ ಕಾರ್ಯಕ್ರಮ ಸ್ವಾಭಿಮಾನಿ ರೈತರ ಕಾರ್ಡ್ ವಿತರಣಾ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದರು.

ಸAಸದ ಕರಡಿ ಸಂಗಣ್ಣ ಅವರು ಮಾತನಾಡಿ, ಕ್ಲಸ್ಟರ್‌ಗೆ ಚಾಲನೆ ದೊರೆತ ಸಂಭ್ರಮದ ಕ್ಷಣ ಇದು. ನಾವು ಅಭಿವೃದ್ಧಿ ಪರ ಇದ್ದೇವೆ. ಜಮೀನು ಕಳೆದುಕೊಂಡವರಿಗೆ ಪರಿಹಾರ ಸಿಕ್ಕಿದೆ. ಆದರೆ ಪಕ್ಕದ ಜಮೀನುಗಳಿಗೆ ಕಾರ್ಖಾನೆಗಳಿಂದಾಗಿ ಬೆಳೆ ಹಾಳಾಗುತ್ತಿದೆ. ಹಾಗಾಗಿ ಇಂಡಸ್ಟಿçಯಲ್ ಕಾರೀಡಾರ್ ಮಾಡಬೇಕು. ಸ್ಥಳೀಯರಿಗೆ ಉದ್ಯೋಗದಲ್ಲಿ ಆಧ್ಯತೆ ನೀಡಬೇಕು. ಹೈವೆ ಹಬ್, ಇಂಡಸ್ಟಿçಯಲ್ ಹಬ್ ಹಾಗೂ ನೀರಾವರಿ ಹಬ್ ಆಗಿ ಕೊಪ್ಪಳ ಬೆಳೆದಿದೆ. ವಿಮಾನ ನಿಲ್ದಾಣ ಒಂದು ಬೇಕಾಗಿದ್ದು, ಈ ನಿಟ್ಟಿನಲ್ಲಿ ಉಡಾನ್ ಯೋಜನೆಗೆ ಎಂಎಸ್‌ಪಿಎಲ್ ನವರು ಸಹಕಾರ ನೀಡುತ್ತಿಲ್ಲ. ಇದಕ್ಕೆ ಮುಖ್ಯಮಂತ್ರಿಗಳು ಅವಕಾಶ ಮಾಡಿಕೊಡಬೇಕು. ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ವಿವಿಗೆ ಸರ್ಕಾರವು ಅನುಮೋದಿಸಿದ್ದು, ಅಭಿನಂಧನಾರ್ಹವಾಗಿದೆ ಎಂದರು.

ಸಮಾರAಭದ ಅಧ್ಯಕ್ಷತೆ ವಹಿಸಿದ್ದ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಮಾತನಾಡಿ, ವೈಶಿಷ್ಟö್ಯ ಪೂರ್ಣವಾದ ಕಿನ್ನಾಳ ಚಿತ್ರಕಲೆ ಜಿಲ್ಲೆಯ ಹೆಮ್ಮೆಯಾಗಿದೆ. ಇದಕ್ಕೆ ಕೈಜೋಡಿಸುವಂತೆ ಆಟಿಕೆ ಕ್ಲಸ್ಟರ್ ನಿರ್ಮಾಣವಾಗುತ್ತಿದೆ. ಉದ್ಯೋಗದಲ್ಲಿ ಈ ಭಾಗದವರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಕುರಿತು ಕಾನೂನಾತ್ಮಕವಾದ ಅವಕಾಶ ಕಲ್ಪಿಸಬೇಕು. ಹುಟ್ಟಿನಿಂದಲೇ ಯಾರೂ ಕೌಶಲ್ಯಗಳನ್ನು ಪಡೆದಿರುವುದಿಲ್ಲ. ಯುವಕರಿಗೆ ತರಬೇತಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ. ೧೦ ವರ್ಷದಲ್ಲಿ ೨೫ ಸಾವಿರ ಉದ್ಯೋಗ ಹಾಗೂ ೧ ಲಕ್ಷ ಪರೋಕ್ಷ ಉದ್ಯೋಗ ಸೃಷ್ಠಿಸುವ ಭರವಸೆ ಸಂಸ್ಥೆಯವರು ನೀಡಿದ್ದಾರೆ. ಈ ಭಾಗದಲ್ಲಿ ವಿಶ್ವವಿದ್ಯಾಲಯ ಹಾಗೂ ಕುಕನೂರು ತಾಲ್ಲೂಕಿಗೆ ಮಿನಿ ವಿದಾನಸೌಧ ನಿರ್ಮಿಸಲು ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವರಾದ ಸಿ.ಸಿ ಪಾಟೀಲ, ಅರಣ್ಯ, ಜೀವಿ ಪರಿಸ್ಥಿತಿ ಹಾಗೂ ಪರಿಸರ ಸಚಿವರಾದ ಆನಂದ ಸಿಂಗ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ.ರಾಜಶೇಖರ್ ಹಿಟ್ನಾಳ, ಶಾಸಕರುಗಳಾದ ಅಮರೇಗೌಡ ಎಲ್. ಪಾಟೀಲ್ ಬಯ್ಯಾಪೂರ, ಪರಣ್ಣ ಈಶ್ವರಪ್ಪ ಮುನವಳ್ಳಿ, ಕೆ.ರಾಘವೇಂದ್ರ ಹಿಟ್ನಾಳ ಹಾಗೂ ಬಸವರಾಜ ದಢೇಸೂಗೂರು, ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಮಾಜಿ ಸಚಿವರಾದ ಆರ್.ವಿ.ದೇಶಪಾಂಡೆ ಹಾಗೂ ಬಸವರಾಜ ರಾಯರಡ್ಡಿ, ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಏಕಸ್ ಚೇರಮನ್ ಅರವಿಂದ ಮೆಳ್ಳಿಗೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Leave a Reply