ವೀರಬ್ರಹ್ಮೇಂದ್ರಸ್ವಾಮಿಗಳ ‘ಕಾಲಜ್ಞಾನ’ ಕೃತಿ ಸಾರ್ವಕಾಲಿಕ- ಗಂಗಾಧರ ಪತ್ತಾರ

ಕೊಪ್ಪಳ, ಜ ೧೦: ಆಂಧ್ರಪ್ರದೇಶದ ಕಡಪಾ ಜಿಲ್ಲೆಯ ಪೋತಲೂರು ವೀರ ಬ್ರಹ್ಮೇಂದ್ರಸ್ವಾಮಿಗಳು ತೆಲುಗು ಭಾಷೆಯಲ್ಲಿ ಬರೆದಿರುವ ‘ಕಾಲಜ್ಞಾನಂ’ ಕೃತಿ ಸಾರ್ವಕಾಲಿಕ ಎಂದು ಶಿಕ್ಷಕ ಗಂಗಾಧರ ಪತ್ತಾರ
ಅಭಿಪ್ರಾಯ ಪಟ್ಟರು.
ಸ್ಥಳೀಯ ಶಕ್ತಿ ಶಾರದೆಯ ಮೇಳ ಹಾಗೂ ಬೆರಗು ಪ್ರಕಾಶನ ನಿವೃತ್ತ ಉಪನ್ಯಾಸಕ ಡಿ ಎಂ ಬಡಿಗೇರ ಅವರ ಅವ್ವ ಸದನದ ಎದುರಿನ ಬಯಲಿನಲ್ಲಿ ಜಂಟಿಯಾಗಿ ಆಯೋಜಿಸಿದ್ದ ಮಾಸಿಕ ಚಿಂತನ- ಮಂಥನ ಗೋಷ್ಠಿಯಲ್ಲಿ ವೀರ ಬ್ರಹ್ಮಯ್ಯಗಾರ ಅವರ ‘ಕಾಲಜ್ಞಾನಂ’ ಕೃತಿ ಕುರಿತು ಮಾತನಾಡಿದರು.
ಮುಂದುವರೆದು ಮಾತನಾಡಿದ ಅವರು ಪಶ್ಚಿಮದ ಲ್ಲಿ ನಾಸ್ಟ್ರಾಡಾಮಸ್ ಹೇಗೋ ಹಾಗೆ ಪೂರ್ವದಲ್ಲಿ
ಬ್ರಹ್ಮಯ್ಯ ಅವರ ಕೃತಿ ಭವಿಷ್ಯದಲ್ಲಿ ಜರಗುವ ಘಟನೆಗಳ ಕುರಿತು ಬೆಳಕು ಚೆಲ್ಲುತ್ತದೆ. ತೆಲುಗು ಭಾಷಿಕರಲ್ಲಿ ಹೆಚ್ಚು ಮನೆ ಮಾತಾಗಿರುವ ಈ ಕೃತಿ ಕನ್ನಡದಲ್ಲಿ ಬಹಳ ವಿರಳ ಎಂದರು.
ದನಗಳನ್ನು ಮೇಯಿಸುತ್ತಲೇ ತಾಳೆಗರಿಯಲ್ಲಿ ಕೃತಿ ರಚನೆ ಮಾಡಿರುವ ಈ ಸಂತ ಜಾತ್ಯಾತೀತ ನಿಲುವಿನ ಮಹಾನ್ ಸಮಾಜ ಸುಧಾರಕ. ಹೊಸ ಪೀಳಿಗೆಯ ಯುವಕರು ಇಂಥ ಕೃತಿಗಳನ್ನು ಓದುವುದರಿಂದ ಸನ್ಮಾರ್ಗದಲ್ಲಿ ಹೆಜ್ಜೆ ಇಡಲು ಅನುವಾಗುತ್ತದೆ ಎಂದು ವಿನಂತಿಸಿದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ರಾಯಚೂರು ಜಿಲ್ಲೆಯ ಸಿಂಧನೂರಿನ ಅನುಭಾವಿ ಮಹಾದೇವಪ್ಪ ಗೊರೇಬಾಳ ಮಾತನಾಡಿ ಸತ್ಸಂಗದಲ್ಲಿ ಬೆಳೆದವ ನಿತ್ಯ ಹಸುರಿನ ಹುಲ್ಲಂತೆ ಬದುಕಬಲ್ಲ. ಹಾಗಾಗಿ ಸಜ್ಜನರ ಸಂಗ ಹೆಜ್ಜೇನು ಸವಿದಂತೆ ಎನ್ನುತ್ತಾನೆ ಸರ್ವಜ್ಞ ಕವಿ ಎಂದರು. ಆಧುನಿಕ ಬದುಕಿನಲ್ಲಿ ಕೆಟ್ಟ ಚಟಗಳೇ ಮನುಷ್ಯನನ್ನು ಮುಗ್ಗುಲು ಮಾಡುತ್ತವೆ. ಅದಕ್ಕಾಗಿ ಪುಸ್ತಕ ಓದುವ ಗೀಳು ಯುವಕರಲ್ಲಿ ಬೆಳೆಯಬೇಕೆಂದು ಒತ್ತಿ ಹೇಳಿದರು.
ಮತ್ತೊಬ್ಬ ಅನುಭಾವಿ ರವಿಕುಮಾರ ಸಹ ಇದೇ ಸಂದರ್ಭದಲ್ಲಿ ಕಾಲಜ್ಞಾನ ಕುರಿತು ಮಾತನಾಡಿದರು.
ಸಾಹಿತಿಗಳಾದ ಎ ಎಂ ಮದರಿ, ಅಲ್ಲಮಪ್ರಭು ಬೆಟ್ಟದೂರು, ವಿಠ್ಠಪ್ಪ ಗೋರಂಟ್ಲಿ, ಎಸ್
ಕಾಶೀಂ ಸಾಹೇಬ್, ಶಿ ಕಾ ಬಡಿಗೇರ, ವಿಜಯ ಅಮೃತರಾಜ, ಪಿ ಬಿ ಪಾಟೀಲ, ಶಿವಪ್ರಸಾದ್ ಹಾದಿಮನಿ, ಬಿ ಪಿ ಮರೇಗೌಡ, ಕವಯಿತ್ರಿ ಅರುಣಾ ನ ಪಾಟೀಲ; ಜಿ ಪಂ ಮಾಜಿ ಅಧ್ಯಕ್ಷ ಎಚ್ ಎಲ್ ಹಿರೇಗೌಡ್ರು, ಬಾಳನಗೌಡ ಪಾಟೀಲ, ವೀರೇಶ ನಾ ಪತ್ತಾರ, ಕೊಟ್ರಯ್ಯ ಅಬ್ಬಿಗೇರಿಮಠ ಮುಂತಾದವರು ಇದ್ದರು.
ಶಿಕ್ಷಕ ರಾಮಣ್ಣ ಡಿ ಅಲ್ಮರ್ಸಿಕೇರಿ ನಿರೂಪಿಸಿ, ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.

Leave A Reply

Your email address will not be published.