Koppal

ಜಿಲ್ಲಾ ಪಂಚಾಯತಿ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆ


ಕೊಪ್ಪಳ ಜ.11 : ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿದ್ದು, ಅವುಗಳನ್ನು ದುರಸ್ತಿ ಪಡಿಸಬೇಕು. ಅಲ್ಲದೇ ಟೆಂಡರ್ ಮಾಡಿದ ಕಾಮಗಾರಿಗಳನ್ನು ಕೂಡಲೇ ಪೂರ್ಣಗೊಳಿಸಬೇಕು ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ್ ಅವರು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಾಲ್ಲೂಕು ಪಂಚಾಯತಿ ಸಭಾಂಗಣದಲ್ಲಿ ಸೋಮವಾರ (ಜ.11) ಆಯೋಜಿಸಲಾಗಿದ್ದ ಜಿಲ್ಲಾ ಪಂಚಾಯತಿಯ ಜಿಲ್ಲಾಮಟ್ಟದ ಮಾಸಿಕ ಕೆಡಿಪಿ(20 ಅಂಶಗಳ ಕಾರ್ಯಕ್ರಮ ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಪ್ಪಳ ತಾಲ್ಲೂಕಿನ ಸಿಂಧೋಗಿ ಹಾಗೂ ಅಲ್ಲಾನಗರ ರಸ್ತೆಗಳು ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಗ್ರಾಮೀಣ ಭಾಗದ ರಸ್ತೆಗಳು ಹಾಳಾಗಿವೆ. ಅವುಗಳನ್ನು ದುರಸ್ತಿ ಮಾಡಿಸಿ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ರಸ್ತೆ ಕಾಮಗಾರಿಗಳನ್ನಾದರೂ ಶೀಘ್ರ ಆರಂಭಿಸಿ.  ಬಹಳ ನಿಧಾನಗತಿಯಲ್ಲಿ ರಸ್ತೆ ಕಾಮಗಾರಿಗಳು ನಡೆಯುತ್ತಿವೆ ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಅಧಿಕಾರಿ  ಕುಲಕರ್ಣಿ, ವಿವಿಧ ಕಾಮಗಾರಿಗಳಿಗೆ ಕೋವಿಡ್‌ನಿಂದಾನಿ ಅನುದಾನ ಬಂದಿಲ್ಲ. ಅನುದಾನ ಬಿಡುಗಡೆಯಾದ ತಕ್ಷಣ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ ಎಂದು ಮಾಹಿತಿ ನೀಡಿದರು.
ಭತ್ತ ಖರೀದಿ ಮಾಡುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಯಾವಾಗ ಖರೀದಿ ಮಾಡುತ್ತೀರಿ. ಕೂಡಲೇ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ರೈತರು ಮಾರಾಟ ಮಾಡುತ್ತಾರೋ, ಬಿಡುತ್ತಾರೋ ಗೊತ್ತಿಲ್ಲ. ಖರೀದಿ ಕೇಂದ್ರ ಆರಂಭಿಸುವುದು ನಿಮ್ಮ ಜವಾಬ್ದಾರಿಯಾಗಬೇಕು. ಅದರಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಅಧ್ಯಕ್ಷರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಡಿ. 20ರಿಂದ ಖರೀದಿ ಕೇಂದ್ರ ಆರಂಭಿಸಿದ್ದರು. 564 ರೈತರು ನೋಂದಣಿ ಮಾಡಿದ್ದಾರೆ. ಆದರೆ ಯಾರೂ ಮಾರಾಟ ಮಾಡಿಲ್ಲ. ನೋಟೀಸ್ ಕೊಟ್ಟರೂ ಕೂಡಾ ರೈತರು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ.   ಅಕ್ಕಿ ಗಿರಣಿ ಮಾಲೀಕರು ಬ್ಯಾಂಕ್ ಗ್ಯಾರಂಟಿ ಕೊಡುತ್ತಿಲ್ಲ. ಬ್ಯಾಂಕಿನವರು ಶೇ. 100ರಷ್ಟು ಹಣ ಪಾವತಿಸುವಂತೆ ತಾಕೀತು ಮಾಡಿದ್ದಾರೆ. ಹಾಗಾಗಿ ಅಕ್ಕಿ ಗಿರಣಿ ಮಾಲೀಕರು ಭತ್ತ ಖರೀದಿಸುತ್ತಿಲ್ಲ. ಕಾರಟಗಿ, ಗಂಗಾವತಿಯ ಮೂರು ಜನ ಅಕ್ಕಿ ಗಿರಣಿ ಮಾಲೀಕರ ಮನಹೊಲಿಸಿದ್ದೇವೆ. ಆದರೆ ಕೊಪ್ಪಳ ಭಾಗದಲ್ಲಿ ಅಕ್ಕಿ ಗಿರಣಿ ಮಾಲೀಕರು ಇಲ್ಲದ ಕಾರಣ ಇನ್ನೂ ಖರೀದಿ ಕೇಂದ್ರ ಆರಂಭಿಸಿಲ್ಲ. ಗಿರಣಿಗಳ ಮಾಲೀಕರ ಮನವೊಲಿಸಿ, ಎರಡು-ಮೂರು ದಿನಗಳಲ್ಲಿ ಖರೀದಿ ಕೇಂದ್ರ ಆರಂಭಿಸುತ್ತೇವೆ ಎಂದು ಆಹಾರ ಸರಬರಾಜು ಇಲಾಖೆಯ ಉಪನಿರ್ದೇಶಕ ಶಾಂತನಗೌಡ ಸಭೆಗೆ ಮಾಹಿತಿ ನೀಡಿದರು.
ಹಿರೇಹಳ್ಳದಲ್ಲಿನ ಒಟ್ಟು 9 ಬ್ರಿಡ್ಜ್ ಕಂ ಬ್ಯಾರೇಜ್‌ನಲ್ಲಿ 7 ಬ್ರಿಡ್ಜ್ ಕಂ ಬ್ಯಾರೇಜ್‌ಗಳ ಕಾಮಗಾರಿಗಳು ಆರಂಭವಾಗಿವೆ. ಇನ್ನೂಳಿದ 2 ಬ್ಯಾರೇಜ್‌ಗಳ ಕಾಮಗಾರಿ ಇನ್ನೂ ಆರಂಭವಾಗಿಲ್ಲ. ನೀರು ಇರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ. ಆದರೂ ಮೂರು-ನಾಲ್ಕು ತಿಂಗಳಲ್ಲಿ ಕಾಮಗಾರಿಗಳನ್ನು ಮುಕ್ತಾಯಗೊಳಿಸುತ್ತೇವೆ ಎಂದು ಸಣ್ಣ ನೀರಾವತಿ ಇಲಾಖೆಯ ಅಧಿಕಾರಿ ಮಾಹಿತಿ ನೀಡಿದರು.
ಎಸ್‌ಸಿಪಿ/ ಟಿಎಸ್‌ಪಿ ಯೋಜನೆಯ ಅಡಿಯಲ್ಲಿ ವಿವಿಧ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ವಿಳಂಬ ಆಗುತ್ತದೆ. ಹಾಗಾಗಿ ತೀವ್ರಗತಿಯಲ್ಲಿ ವಿವಿಧ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಿಗೆ ಜಿ.ಪಂ.ಅಧ್ಯಕ್ಷರು ಸೂಚನೆ ನೀಡಿದರು.
ಆರೋಗ್ಯ ಇಲಾಖೆ;
ಮೊದಲ ಹಂತದಲ್ಲಿ 10,335 ಜನರಿಗೆ ಕೋವಿಡ್-19 ವ್ಯಾಕ್ಸಿನ್ ನೀಡಲಾಗುತ್ತದೆ. ವ್ಯಾಕ್ಸಿನ್ ಸಂಗ್ರಹಣೆಗೆ ಬೇಕಾದ ಎಲ್ಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ. ಕೋವಿಡ್-19 ವ್ಯಾಕ್ಸಿನ್ ಈಗಾಗಲೇ ರಾಜ್ಯಕ್ಕೆ ಬಂದಿದ್ದು, ಜ. 12ರಂದು ಜಿಲ್ಲೆಯಲ್ಲಿ ಲಭ್ಯವಾಗಲಿದೆ. ಆರಂಭಿಕವಾಗಿ 60 ವರ್ಷದ ವೃದ್ಧರಿಗೆ ಮಾತ್ರ ವ್ಯಾಕ್ಸಿನ್ ನೀಡಲಾಗುತ್ತದೆ. ಬಳಿಕ ಆದ್ಯತೆ ಮೇರೆಗೆ ವ್ಯಾಕ್ಸಿನ್ ನೀಡಲಾಗುತ್ತದೆ. ಅಲ್ಲದೇ 18 ವರ್ಷದ ಒಳಗಿನವರಿಗೆ ವ್ಯಾಕ್ಸಿನ್ ನೀಡಲಾಗುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಟಿ.ಲಿಂಗರಾಜು ಮಾಹಿತಿ ನೀಡಿದರು.
ಶಿಕ್ಷಣ ಇಲಾಖೆ;
6ರಿಂದ 10ನೇ ತರಗತಿವರಗೆ ಮಾತ್ರ ಆಫ್‌ಲೈನ್ ತರಗತಿಗಳನ್ನು ಆರಂಭಿಸಿದ್ದು, ಉಳಿದಂತೆ ವಿದ್ಯಾಗಮವೂ ಪ್ರಗತಿಯಲ್ಲಿದೆ. ಮಕ್ಕಳು ಆಸಕ್ತಿಯಿಂದ ಶಾಲೆಗೆ ಬರುತ್ತಿದ್ದಾರೆ. ಪಾಲಕರು ಸಹಿತ ಸಹಕಾರ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ನಾಲ್ಕು ಜನ ಶಿಕ್ಷಕರಿಗೆ ಕೊರೊನಾ ದೃಢಪಟ್ಟಿದ್ದು, ಅದಕ್ಕೆ ಬೇಕಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮಕ್ಕಳ ದಾಖಲೆಗೆ ಅನುಸಾರವಾಗಿ ಗುಂಪುಗಳನ್ನು ರಚಿಸಿದ್ದೇವೆ. ಇದರಲ್ಲಿ 15-20 ವಿದ್ಯಾರ್ಥಿಗಳು ಮಾತ್ರ ಇರುತ್ತಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಹಾಗೂ ಮನೆಯಿಂದ ಬರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಗುಂಪುಗಳನ್ನು ರಚನೆ ಮಾಡಿ, ಬೋಧನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತ ಸದಸ್ಯ ಅಮರೇಶ ಗೋನಾಳ ಸಲಹೆ ನೀಡಿದರು. ಇದಕ್ಕೆ ಸಿಇಓ, ಅಧ್ಯಕ್ಷರೂ ಧ್ವನಿಗೂಡಿಸಿದರು. ಇದಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಮ್ಮತಿಸಿದರು.
ಪಿಡಬ್ಲ್ಯೂಡಿ ಹಾಗೂ ಪಿಆರ್ ಇಡಿ ಅಧಿಕಾರಿಗಳಿಗೆ ವಿವಿಧ ಕಾಮಗಾರಿಗಳಿಗೆ ಬಜೆಟ್‌ನಿಂದ ಬರುವ ಅನುದಾನವನ್ನು ಪೋಲು ಮಾಡಬೇಡಿ ಎಂದು ಅಧ್ಯಕ್ಷರು ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಬೀನಾ ಗೌಸ್, ಜಿ.ಪಂ. ಸಿಇಒ ರಘುನಂದನ್‌ಮೂರ್ತಿ, ಉಪ ಕಾರ್ಯದರ್ಶಿ ಶರಣಬಸವರಾಜ, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply