ಗದಗ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣ ಪತ್ತೆ ಇಲ್ಲ  

ಗದಗ  12:   ಗದಗ ಜಿಲ್ಲೆಯಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಂಡು ಬಂದಿಲ್ಲ.  ಹಕ್ಕಿ ಜ್ವರ ಕುರಿತು ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಆಗಿರುವ ಪ್ರಭಾರಿ ಜಿಲ್ಲಾಧಿಕಾರಿ ಡಾ.ಆನಂದ್ ಕೆ ಅವರು ಸೂಚಿಸಿದರು.
ಗದಗ ಜಿಲ್ಲಾಧಿಕಾರಿಗಳ ಕಚೇರಿಯ ಜಿ.ಪಂ. ಸಭಾಂಗಣದಲ್ಲಿ ಜರುಗಿದ ಜಿಲ್ಲಾ  ಮಟ್ಟದ ಕೋಳಿ ಶೀತ ಜ್ವರ ನಿಯಂತ್ರಣ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಷ್ಟ್ರದ ವಿವಿಧ ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಂಡು ಬಂದಿದ್ದು ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ  ಪಕ್ಷಿಗಳಲ್ಲಿ ರೋಗ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವಹಿಸಬೇಕಾದ ಸೂಕ್ತ ಕ್ರಮಗಳ ಕುರಿತು ಅಗತ್ಯದ ಕ್ರಮಗಳನ್ನು ಕೈಗೊಳ್ಳಬೇಕು.  ಸಾರ್ವಜನಿಕರು ಯಾವುದೇ ಭಯ ಹಾಗೂ ಆತಂಕ ಪಡುವ ಅಗತ್ಯವಿಲ್ಲ.  ಮುಂಜಾಗ್ರತೆ ವಹಿಸುವುದು ಅಗತ್ಯವಾಗಿದೆ ಎಂದರು.
ಜಿಲ್ಲೆಯ ಕೋಳಿ ಫಾರಂ ಮಾಲೀಕರಿಗೆ ಸೂಕ್ತ ರೀತಿಯ ರೋಗ ಲಕ್ಷಣಗಳ ಕುರಿತು ಮಾಹಿತಿ ಒದಗಿಸಬೇಕು. ಹಾಗೂ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಕೋಳಿ ಫಾರಂ ಪರಿಶೀಲಿಸಬೇಕು ಎಂದು ಸೂಚಿಸಿದರು.  ಪಕ್ಷಿ ವೀಕ್ಷಕರು , ಪಕ್ಷಿ ಪ್ರಿಯರು ಹಾಗೂ ಸಾರ್ವಜನಿಕರು ತಾವು ವಾಸಿಸುವ ಸುತ್ತ ಮುತ್ತಲಿನ ಪರಿಸರದಲ್ಲಿ ಪಕ್ಷಿಗಳು ಮರಣ ಹೊಂದುವುದು ಕಂಡು ಬಂದಲ್ಲಿ ತಕ್ಷಣವೇ ಹತ್ತಿರದ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ಒದಗಿಸಬೇಕು.  ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಸಾವನ್ನಪ್ಪಿದ ಪಕ್ಷಿಗಳನ್ನು ಪರೀಕ್ಷೆಗೊಳಪಡಿಸುವ ಮೂಲಕ ಸೂಕ್ತ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯದಲ್ಲಿರುವ ಪಕ್ಷಿಗಳನ್ನು ಸೂಕ್ಷ್ಮವಾಗಿ ಗಮನಿಸಿ ರೋಗ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣ ಮಾಹಿತಿ ಒದಗಿಸಬೇಕು. ಅಲ್ಲದೇ ಮಾಗಡಿ ಕೆರೆಗೆ ವಿದೇಶಿ ಹಕ್ಕಿಗಳು ಆಗಮಿಸಿದ್ದು ಅಲ್ಲಿಯೂ ಸಹ ನಿಗಾ ವಹಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದರು.
ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಮನಗೂಳಿ  ಮಾತನಾಡಿ  ಕೋಳಿ ಮಾಂಸ ಹಾಗೂ ಕೋಳಿ ತತ್ತಿಯನ್ನು ಚೆನ್ನಾಗಿ ಬೇಯಿಸಿ ಸೇವಿಸಿದÀಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗದೇ ಪಕ್ಷಿಗಳಲ್ಲಿ ರೋಗಲಕ್ಷಣಗಳು ಕಂಡುಬಂದಲ್ಲಿ ಪಶು ಸಂಗೋಪನಾ ಇಲಾಖೆಗೆ ಮಾಹಿತಿ ಒದಗಿಸಬೇಕೆಂದು ತಿಳಿಸಿದರು.  ಹಕ್ಕಿ ಜ್ವರವು 2017 ರಲ್ಲಿ ಬೀದರ್ ಜಿಲ್ಲೆಯಲ್ಲಿ ಕಾಣಿಸಿಕೊಂಡಿತು.  ನಂತರ ಕಳೆದ ವರ್ಷ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಲಕ್ಷಣಗಳು ಕಾಣಿಸಿಕೊಂಡಿತು.  ಆದರೆ ಗದಗ ಜಲ್ಲೆಯಲ್ಲಿ ಅಂತಹ ಪ್ರಕರಣಗಳು ವರದಿಯಾಗಿಲ್ಲ ಎಂದರು.
ಸಭೆಯಲ್ಲಿ ನಗರಸಭೆ ಪೌರಾಯುಕ್ತ ರಮೇಶ ಜಾಧವ ಸೇರಿದಂತೆ ಅರಣ್ಯ ಇಲಾಖೆ, ಪಶುಸಂಗೋಪನಾ ಇಲಾಖೆ , ಆರೋಗ್ಯ ಇಲಾಖೆ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.